10 ದಿನದಲ್ಲೇ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.50ರಷ್ಟು ಕುಸಿತ!

ರಾಜ್ಯದಲ್ಲಿ ತಾರಕಕ್ಕೇರಿದ್ದ ಮಾರಕ ಕೊರೋನಾ ವೈರಸ್ ಸೋಂಕು ಇದೀಗ ಕ್ರಮೇಣ ತಹಬದಿಗೆ ಬರುತ್ತಿದ್ದು ಕಳೆದ 10 ದಿನಗಳ ಅಂತರದಲ್ಲಿ ರಾಜ್ಯದಲ್ಲಿನ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಶೇ.50ರಷ್ಟು ಕುಸಿತ ಕಂಡುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ತಾರಕಕ್ಕೇರಿದ್ದ ಮಾರಕ ಕೊರೋನಾ ವೈರಸ್ ಸೋಂಕು ಇದೀಗ ಕ್ರಮೇಣ ತಹಬದಿಗೆ ಬರುತ್ತಿದ್ದು ಕಳೆದ 10 ದಿನಗಳ ಅಂತರದಲ್ಲಿ ರಾಜ್ಯದಲ್ಲಿನ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಶೇ.50ರಷ್ಟು ಕುಸಿತ ಕಂಡುಬಂದಿದೆ.

ಹೌದು.. ಅಕ್ಟೋಬರ್ 21ರಿಂದ 31 ಅವಧಿಯಲ್ಲಿ ರಾಜ್ಯದಲ್ಲಿನ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಶೇ.50ರಷ್ಟು ಕುಸಿತವಾಗಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಆಕ್ಟೋಬರ್ 21ರಂದು ರಾಜ್ಯದಲ್ಲಿ ಒಟ್ಟು 1,00,440 ಸಕ್ರಿಯ ಪ್ರಕರಣಗಳಿದ್ದವು. ಈ ಸಂಖ್ಯೆ ಆಕ್ಟೋಬರ್ 31ರ ವೇಳೆಗೆ  50,592ಕ್ಕೆ ಇಳಿಕೆಯಾಗಿದೆ. ಕೋವಿಡ್ ಪರೀಕ್ಷಾ ಸಂಖ್ಯೆಗಳ ಹೆಚ್ಚಳ, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಶೋಧ ಮತ್ತು ಪತ್ತೆ, ಆರಂಭದಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದು, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿ ಮಾಡಿರುವುದು ಸಕ್ರಿಯ  ಪ್ರಕರಣಗಳ ಕುಸಿತಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಶನಿವಾರ ರಾಜ್ಯದಲ್ಲಿ 3,652 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿತ್ತು. ಆ ಮೂಲಕ ರಾಜ್ಯದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 8,27,064ಕ್ಕೆ ಏರಿಕೆಯಾಗಿತ್ತು. ಅಂತೆಯೇ 24 ಮಂದಿ ಸೋಂಕಿತರು ಸಾವನ್ನಪ್ಪುವ ಮೂಲಕ ಸೋಂಕಿಗೆ ಬಲಿಯಾದವರ ಸಂಖ್ಯೆ 8,053ಕ್ಕೆ ಏರಿಕೆಯಾಗಿತ್ತು. 

ಇನ್ನು ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಕೂಡ ಗಣನೀಯ ಮಟ್ಟದಲ್ಲಿ ಏರಿಕೆಯಾಗಿದ್ದು, ಜುಲೈ 28ರವೇಳೆಗೆ ಶೇ.35.29ರಷ್ಟಿದ್ದ ಚೇತರಿಕೆ ಪ್ರಮಾಣ ಅಕ್ಟೋಬರ್ 31ರ ವೇಳೆಗೆ ಶೇ.92.52ಕ್ಕೆ ಏರಿಕೆಯಾಗಿತ್ತು. ಅಂತೆಯೇ ಸತತ 18ನೇ ದಿನವೂ ರಾಜ್ಯದಲ್ಲಿ ಹೊಸ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ  ಹೆಚ್ಚಿತ್ತು. ಕರ್ನಾಟಕದ ಕೊರೋನಾ ಹಾಟ್ ಸ್ಪಾಟ್ ಆಗಿದ್ದ ಬೆಂಗಳೂರಿನಲ್ಲೂ ಹೊಸ ಸೋಂಕಿತರ ಸಂಖ್ಯೆ 4 ಸಾವಿರದಿಂದ 2000ಕ್ಕೆ ಕುಸಿದಿದೆ. ಆದರೂ ಈಗಲೂ ಕೂಡ ಕರ್ನಾಟಕದ ಒಟ್ಟಾರೆ ಸೋಂಕಿತರ ಸಂಖ್ಯೆಯ ಶೇ.50ರಷ್ಟು ಸೋಂಕು ಪ್ರಕರಣಗಳು ಬೆಂಗಳೂರಿನಲ್ಲೇ ದಾಖಲಾಗುತ್ತಿವೆ ಎಂಬುದು  ಗಮನಾರ್ಹ. ಶನಿವಾರ ಬೆಂಗಳೂರಿನಲ್ಲಿ 2,167 ಸೋಂಕು ಪ್ರಕರಣಗಳು ದಾಖಲಾಗಿದ್ದು, ಇದು ರಾಜ್ಯದಲ್ಲಿ ದಾಖಲಾದ ಸೋಂಕು ಪ್ರಕರಣಗಳ ಶೇ.59.33ರಷ್ಟು ಆಗಿದೆ.

ಈ ಆತಂಕಕಾಗಿ ಅಂಕಿ ಅಂಶಗಳ ನಡುವೆಯೂ ಬೆಂಗಳೂರಿನಲ್ಲಿ ಚೇತರಿಕೆ ಪ್ರಮಾಣ ಏರಿಕೆಯಾಗಿದ್ದು, ಶೇ.89.82 ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. 

ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳ ಸಲಹೆಗಾರ, ತೀವ್ರ ನಿಗಾ ವೈದ್ಯ ಮತ್ತು ರಾಜ್ಯ ಕ್ರಿಟಿಕಲ್ ಕೇರ್ ಸಪೋರ್ಟ್ ಟೀಮ್ (ಸಿಸಿಎಸ್ಟಿ) ಸದಸ್ಯ ಡಾ.ಪ್ರದೀಪ್ ರಂಗಪ್ಪ ಅವರು ಈ ಬಗ್ಗೆ ಮಾತನಾಡಿದ್ದು, ಬೆಂಗಳೂರಿನಲ್ಲಿ ಹೆಚ್ಚಿನ ಜನಸಾಂದ್ರತೆ ಇರುವುದರಿಂದ ಹೆಚ್ಚಿನ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಇತರ  ಜಿಲ್ಲೆಗಳಿಗಿಂತ ಬೆಂಗಳೂರು ಹೆಚ್ಚು ಜನಸಂಖ್ಯೆ ಹೊಂದಿದೆ. ಇದೂ ಕೂಡ ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಇತರೆ ಮೆಟ್ರೋ ನಗರಗಳಿಗೆ ಹೋಲಿಕೆ ಮಾಡಿ ನೋಡಿದಾಗಲೂ ಬೆಂಗಳೂರಿನ ಸ್ಥಿತಿಯೇನೂ ಭಿನ್ನವಾಗಿಲ್ಲ. ದೆಹಲಿ, ಮುಂಬೈ ಮತ್ತು ಚೆನ್ನೈ ನಂತಹ ಮಹಾನಗರಗಳು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಅಲ್ಲಿ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಅದಾಗ್ಯೂ ಜಪಾನ್ ನ 'ತ್ರೀ ಸಿ' ಮಾರ್ಗ  ಅಂದರೆ, (close contact, closed spaces, crowded places)ನಿಕಟ ಸಂಪರ್ಕ, ಮುಚ್ಚಿದ ಸ್ಥಳಗಳು, ಕಿಕ್ಕಿರಿದ ಸ್ಥಳಗಳ ಕುರಿತು ಗಮನ ಹರಿಸಿ ಕ್ರಮ ಕೈಗೊಂಡರೆ ಸೋಂಕಿನ ಹೆಡೆಮುರಿ ಕಟ್ಟಬಹುದು. ಆದರೆ ಈ ವಿಚಾರವನ್ನು ನಗರದಲ್ಲಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು  ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com