ಆರ್ ಆರ್ ನಗರ ಉಪ ಚುನಾವಣೆ: ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ

ಮಂಗಳವಾರ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಚುನಾವಣೆಗೆ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕೋರೋನಾ ಸೋಂಕಿತರಿಗೂ ಸಹ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಂಜುನಾಥ್ ಪ್ರಸಾದ್
ಮಂಜುನಾಥ್ ಪ್ರಸಾದ್

ಬೆಂಗಳೂರು: ಮಂಗಳವಾರ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಚುನಾವಣೆಗೆ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕೋರೋನಾ ಸೋಂಕಿತರಿಗೂ ಸಹ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಆರ್ ಆರ್. ನಗರ ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಶೇಕಡ 20ರಷ್ಟು ಚನಾವಣಾ ಸಿಬ್ಬಂದಿಯನ್ನು ಹೆಚ್ಚುವರಿ ನೇಮಕ ಮಾಡಲಾಗಿದೆ ಎಂದರು.

ಅನಾರೋಗ್ಯ ಕಂಡುಬಂದ ಸಿಬ್ಬಂದಿಯನ್ನು ತಕ್ಷಣ ಬದಲಾಯಿಸಲಾಗುವುದು. ಕೊರೋನಾ ಸೋಂಕಿನ ಲಕ್ಷಣವಿದ್ದವರೂ ಯಾರನ್ನು ಸಹ ಚುನಾವಣಾ ಕೆಲಸಕ್ಕೆ ಬರುವಂತೆ ಒತ್ತಾಯ ಮಾಡುತ್ತಿಲ್ಲ ಎಂದು ಹೇಳಿದರು.

ಆರ್ ಆರ್ ನಗರದಲ್ಲಿ 678 ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾನಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ಮತ ಚಲಾಯಿಸುವ ವ್ಯಕ್ತಿಗೆ ಬಲಗೈಗೆ ಹ್ಯಾಂಡ್ ಗ್ಲೌಸ್ ಎಡಗೈನ ಮಧ್ಯ ಬೆರಳಿಗೆ ಶಾಯಿ ಹಾಕಲಾಗುವುದು. 678 ಮತಗಟ್ಟೆಗಳಿಗೆ ಏಜೆಂಟರನ್ನು ನೇಮಕ ಮಾಡಲಾಗಿದೆ ಎಂದು ವಿವರ ನೀಡಿದರು. 

ಚುನಾವಣೆ ಕೆಲಸಕ್ಕೆ ನಿಯೋಜನೆ ಗೊಂಡ ಎಲ್ಲ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪೊಲೀಸ್ ಅಧಿಕಾರಿಗಳು ಸೂಕ್ಷ್ಮ ಮತಗಟ್ಟೆ, ಅತಿ ಸೂಕ್ಷ್ಮ ಮತಗಟ್ಟೆ ಬಗ್ಗೆ ಸಿದ್ಧತೆಮಾಡಿಕೊಂಡಿದ್ದಾರೆ. ಕೋವಿಡ್ ಎಂದು ಯಾರೂ ಮನೆಯಲ್ಲಿ ಕೂರಬಾರದು. ಮತದಾನ ಮಾಡುವುದಕ್ಕೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಯಾರೂ ಭಯ, ಆತಂಕ ಪಡದೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ಮಾಸ್ಕ್ ಹಾಕಿಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯ ಎಂದರು.

ಚುನಾವಣಾ ಪ್ರಚಾರ ಆರಂಭ ಆದಾಗಿನಿಂದ ಆರ್ ಆರ್ ನಗರದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಪ್ರಕರಣಗಳು ಹೆಚ್ಚಾಗಿದೆ. ಮೊದಲು 60 - 70 ಪ್ರಕರಣಗಳಿದ್ದವು. ಆದರೆ ಕಳೆದ ಒಂದು ವಾರದಿಂದ ಹೆಚ್ಚಾಗಿದೆ. ಚುನಾವಣೆ ಮುಕ್ತಾಯ ಬಳಿಕ ಈ ಕ್ಷೇತ್ರದಲ್ಲಿ ಹೆಚ್ಚು ಪರೀಕ್ಷೆ ಮಾಡಲಾಗುವುದು. ಕೊರೋನಾ ಸೋಂಕಿತರೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಸೋಂಕಿತರ ಮನೆಗೆ ಆ್ಯಂಬ್ಯುಲೆನ್ಸ್ ಕಳುಹಿಸಿ ಮತಗಟ್ಟೆಗೆ ಕರೆದುಕೊಂಡು ನಂತರ ಮನೆಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದರು. 

ಮತದಾರರಿಗೆ ಥರ್ಮಲ್ ಸ್ಕ್ರಿನಿಂಗ್, ಟೆಂಪರೇಚರ್ ಚೆಕ್ ಅಪ್ ಮಾಡಿ ಮತ ಕೇಂದ್ರಕ್ಕೆ ಬಿಡಲಾಗುವುದು. ಬೆಳಗ್ಗೆ 7 ರಿಂದ ಸಂಜೆ ಆರು ಗಂಟೆ ತನಕ ಮತದಾನಕ್ಕೆ ಅವಕಾಶ ನೀಡಲಾಗಿದೆ .ಆರು ಗಂಟೆ ಒಳಗೆ ಸರದಿ ಸಾಲಿನಲ್ಲಿ ನಿಂತವರಿಗೆಲ್ಲರಿಗೂ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com