ಆರ್.ಆರ್ ನಗರ ಉಪಚುನಾವಣೆ: ಕ್ಷೇತ್ರದ ಹೊರಗಿನವರ ವಿರುದ್ಧ ಕ್ರಮ- ಕಮಲ್ ಪಂತ್

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿಭದ್ರತೆ ಕಲ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿಭದ್ರತೆ ಕಲ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚುನಾವಣಾ ಪ್ರಚಾರ ಪ್ರಕ್ರಿಯೆ ಶಾಂತಯುತವಾಗಿ ನಡೆದಿದೆ. ನ.3ರಂದು ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಲಾಗಿದ್ದು, ಭದ್ರತೆಗಾಗಿ 30 ತಂಡಗಳನ್ನು ನೇಮಿಸಲಾಗಿದೆ. ಇಂದು ಪ್ರಚಾರದ ಕೊನೆಯ ದಿನವಾಗಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.

ಕ್ಷೇತ್ರದಲ್ಲಿ ಬಿಗಿ ಭದ್ರತೆಗಾಗಿ 2,500 ಜನ ಪೊಲೀಸರನ್ನು, 112 ಮೊಬೈಲ್ ಸ್ಕ್ವಾಡ್ ಗಳನ್ನು ನಿಯೋಜನೆಗೊಳಿಸಲಾಗಿದೆ ಎಂದರು.

ಕ್ಷೇತ್ರದಲ್ಲಿ 32 ಹೊಯ್ಸಳ, 91 ಚೀತಾ ವಾಹನಗಳು ಗಸ್ತು ತಿರುಗಲಿವೆ. ಈಗಾಗಲೇ ಭಾನುವಾರ ಸಂಜೆಯಿಂದಲೇ ಮದ್ಯ ಮಾರಾಟ ನಿಷೇಧಿಸಲಾಗಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 678 ಮತಗಟ್ಟೆಗಳಿದ್ದು, ಈ ಪೈಕಿ 82 ಸೂಕ್ಷ್ಮ ಮತಗಟ್ಟೆಗಳಿವೆ. ಸೂಕ್ಷ್ಮ ಮತಗಟ್ಟೆಗಳಿಗೆ ವಿಶೇಷ ಭದ್ರತೆ ಕಲ್ಪಿಸಲಾಗಿದೆ ಎಂದರು.

ಮೂರು ಡಿಸಿಪಿಗಳನ್ನು ನಿಯೋಜನೆಗೊಳಿಸಲಾಗಿದ್ದು, 160 ಪೊಲೀಸ್ ವಾಹನಗಳು ಗಸ್ತು ತಿರುಗಲಿವೆ. ಮತದಾನ ಹಿನ್ನೆಲೆಯಲ್ಲಿ ಹೊರಗಿನಿಂದ ಯಾರೊಬ್ಬರೂ ಕ್ಷೇತ್ರದಲ್ಲಿ ಬಂದು ತಂಗುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಕ್ಷೇತ್ರದವರನ್ನು ಹೊರತುಪಡಿಸಿದಂತೆ ಬೇರೆಯವರಿದ್ದರೆ, ಪ್ರವೇಶ ಮಾಡಿದ್ದರೆ, ತಂಗಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ಶಾಂತಿಯುತ ಮತದಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕ್ಷೇತ್ರದಲ್ಲಿ ಭದ್ರತೆಗಾಗಿ 8 ಎಸಿಪಿ, 30 ಇನ್ಸ್ಪೆಕ್ಟರ್, 94 ಸಬ್ ಇನ್ಸ್ಪೆಕ್ಟರ್, 185 ಎಎಸ್ ಐ, 1547 ಮುಖ್ಯ ಪೇದೆ, ಪೇದೆಗಳು ಸೇರಿ 699 ಹೋಂ ಗಾರ್ಡ್ ಗಳನ್ನು ನಿಯೋಜನೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com