ಇದುವರೆಗೆ ರಾಜ್ಯದ ಶೇ.11 ರಷ್ಟು ಪೊಲೀಸರಿಗೆ ಕೊರೋನಾ, 87 ಸಿಬ್ಬಂದಿ ಸಾವು!

ರಾಜ್ಯದಲ್ಲಿರುವ 80,000 ಮಂದಿ ಪೊಲೀಸರಲ್ಲಿ ಶೇ.11 ರಷ್ಟು ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದ್ದು, ಇದರಲ್ಲಿ 87 ಮಂದಿ ಪೊಲೀಸರನ್ನು ಮಹಾಮಾರಿ ವೈರಸ್ ಬಲಿಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿರುವ 80,000 ಮಂದಿ ಪೊಲೀಸರಲ್ಲಿ ಶೇ.11 ರಷ್ಟು ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದ್ದು, ಇದರಲ್ಲಿ 87 ಮಂದಿ ಪೊಲೀಸರನ್ನು ಮಹಾಮಾರಿ ವೈರಸ್ ಬಲಿಪಡೆದುಕೊಂಡಿದೆ ಎಂದು ತಿಳಿದುಬಂದಿದೆ. 

ನವೆಂಬರ್ 2ರವರೆಗೂ 9,348 ಮಂದಿ ಪೊಲೀಸರಿಗೆ ಕೊರೋನಾ ಸೋಂಕು ತಗುಲಿದ್ದು, ಇದರಲ್ಲಿ ಈಗಾಗಲೇ  8,052 ಮಂದಿ ಸೋಂಕಿನಿಂದ ಚೇತರಿಸಿಕೊಂಡು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 

ಬೆಂಗಳೂರು ನಗರದಲ್ಲಿ ಈವರೆಗೆ 2,904 ಮಂದಿ ಪೊಲೀಸ್ ಸಿಬ್ಬಂದಿ ಕೊರೋನಾ ಸೋಂಕು ದೃಢಪಟ್ಟಿದ್ದು ಇದರಲ್ಲಿ ಈವರೆಗೂ 2,432 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲದೆ, 31 ಸಿಬ್ಬಂದಿ ಕೋವಿಡ್ -19ಕ್ಕೆ ಬಲಿಯಾಗಿದ್ದಾರೆ. 

ಈ ನಡುವೆ ಕೊರೋನಾ ಕರ್ತವ್ಯದ ವೇಳೆ ಸೋಂಕು ತಗುಲಿ ಮೃತಪಟ್ಟಿರುವ 84 ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ರೂ.30 ಲಕ್ಷ ಪರಿಹಾರ ನೀಡಲಾಗಿದೆ. ಇನ್ನೂ ಮೂವರು ಪೊಲೀಸರು ಇತ್ತೀಚೆಗಷ್ಟೇ ಸಾವನ್ನಪ್ಪಿದ್ದು, ಮೃತ ಪೊಲೀಸರ ಕುಟುಂಬಸ್ಥರಿಗೂ ಶೀಘ್ರದಲ್ಲೇ ಪರಿಹಾರ ನೀಡಲಾಗುತ್ತದೆ. ಇದಲ್ಲದೆ, ಮೃತ ಪೊಲೀಸರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಪೊಲೀಸರಿಗೂ ಸೋಂಕು ತಗುಲುವ ಸಂಖ್ಯೆ ಕಡಿಮೆಯಾಗುತ್ತಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಪ್ರತೀನಿತ್ಯ 20-30 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೀಗ ಈ ಸಂಖ್ಯೆ ಒಂದಂಕಿಗೆ ಬಂದು ನಿಂತಿದೆ. ಇದು ಆರೋಗ್ಯಕರ ಬೆಳವಣಿಗೆಯಾಗಿದೆ. ಕೊರೋನಾಗೆ ಪೊಲೀಸರನ್ನು ಬಲಿಯಾಗಲು ಬಿಡುವುದಿಲ್ಲ. ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆಎಂದು ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com