ಡ್ರಗ್ಸ್ ಪ್ರಕರಣ: ಬಿನೀಶ್ ಕೊಡಿಯೇರಿ ಮತ್ತೆ 5 ದಿನ ಇಡಿ ಕಸ್ಟಡಿಗೆ!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೀಶ್ ಕೊಡಿಯೇರಿಯನ್ನು ಮತ್ತೆ 5 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಬಿನೀಶ್ ಕೊಡಿಯೇರಿ
ಬಿನೀಶ್ ಕೊಡಿಯೇರಿ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೀಶ್ ಕೊಡಿಯೇರಿಯನ್ನು ಮತ್ತೆ 5 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಕ್ಟೋಬರ್ 29 ರಂದು ಬಿನೀಶ್ ಕೊಡಿಯೇರಿ ಅವರನ್ನು ಬಂಧಿಸಲಾಗಿತ್ತು. ನಂತರ ನವೆಂಬರ್ 2ರವರೆಗೂ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿತ್ತು. ಬಿನೀಶ್ ಕೊಡಿಯೇರಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಸೋಮವಾರ ಇಡಿ ಅಧಿಕಾರಿಗಳು ನಗರದ  ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಜಾರಿ ನಿರ್ದೇಶನಾಲಯ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಇಡಿ ಪರ ವಾದಿಸಿದ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು, ಆರೋಪಿ ಬಿನೀಶ್ ಕೊಡಿಯೇರಿ ಅಕ್ರಮದಲ್ಲಿ ಭಾಗಿಯಾಗಿರುವ ಕುರಿತು ಮತ್ತಷ್ಟು ತನಿಖೆ  ನಡೆಸುವ ಅಗತ್ಯವಿದೆ. ಆದರೆ, ಆರೋಪಿ ಅನಾರೋಗ್ಯದ ಕಾರಣ ಒಡ್ಡಿ ತನಿಖೆಗೆ ಸರಿಯಾಗಿ ಸಹಕರಿಸಿಲ್ಲ. ಹೀಗಾಗಿ ಮತ್ತಷ್ಟು ದಿನಗಳ ಕಾಲ ಇಡಿ ವಶಕ್ಕೆ ನೀಡಬೇಕು ಎಂದು ಕೋರಿದರು. 

ಅಂತೆಯೇ ಆರೋಪಿ ಬಿನೀಶ್ ಕೊಡಿಯೇರಿ ವಿರುದ್ಧ ಕೇರಳದಲ್ಲೇ 10 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದು, ದುಬೈನಲ್ಲಿ ಸಹ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಅಂತೆಯೇ ಈತ ಬೇನಾಮಿ ಹೆಸರಿನಲ್ಲಿ ಹಲವು ಶೆಲ್ ಕಂಪನಿಗಳನ್ನು ಸ್ಥಾಪಿಸಿದ್ದಾನೆ. ಇದೇ ಸಂಸ್ಥೆಗಳ ಮೂಲಕ 3.5 ಕೋಟಿ  ರೂಪಾಯಿ ಹಣವನ್ನು ಹವಾಲ ಮೂಲಕ ಸಾಗಿಸಿರುವ ಮಾಹಿತಿ ಇದೆ. ಇಷ್ಟಲ್ಲದೇ ಬಿನೀಶ್ ತನ್ನೊಂದಿಗೆ ಮಾದಕ ವಸ್ತು ಸೇವಿಸಿರುವ ಕುರಿತು ಡ್ರಗ್ಸ್ ಜಾಲದ ಪ್ರಮುಖ ಆರೋಪಿ ಅನೂಪ್ ಹೇಳಿಕೆ ನೀಡಿದ್ದಾನೆ. ಕೇರಳ ಮಾಜಿ ಗೃಹ ಸಚಿವರ ಪುತ್ರನಾಗಿರುವ ಈತ ಸಾಕಷ್ಟು ಪ್ರಭಾವಿಯಾಗಿದ್ದು, ಮತ್ತಷ್ಟು ವಿಚಾರಣೆ  ನಡೆಸುವ ಅಗತ್ಯವಿದೆ. ಹೀಗಾಗಿ ಇಡಿ ವಶಕ್ಕೆ ನೀಡಬೇಕು ಎಂದು ಪ್ರಸನ್ನ ಕುಮಾರ್ ಮನವಿ ಮಾಡಿದ್ದರು.

ಇದಕ್ಕೆ ಆರೋಪಿ ಪರ ವಾದಿಸಿದ ಹಿರಿಯ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು, ತಮ್ಮ ಕಕ್ಷೀದಾರರು ತಮ್ಮ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ಸಂಬಂಧಪಟ್ಟ ಏಜೆನ್ಸಿಗಳಿಗೆ ಬಹಿರಂಗಪಡಿಸಿದ್ದಾರೆ ಎಂದು ವಾದಿಸಿದರು. ಆದರೆ, ಆರೋಪಿಯನ್ನು ಮತ್ತಷ್ಟು ವಿಚಾರಣೆಗೆ  ಒಳಪಡಿಸಿರುವ ಅಗತ್ಯವಿದೆ ಎಂಬ ಇಡಿ ಪರ ವಕೀಲರ ವಾದ ಪುರಸ್ಕರಿಸಿದ ನ್ಯಾಯಾಲಯ ಮತ್ತೆ 5 ದಿನಗಳ ಕಾಲ ನವೆಂಬರ್ 7ರವರೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಶಕ್ಕೆ ನೀಡಿ ಆದೇಶಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com