ಉಪಚುನಾವಣೆ: ಕೋವಿಡ್-19 ಸೋಂಕಿತರಿಂದ ಮತ ಚಲಾವಣೆ

ರಾಜ್ಯ ವಿಧಾನಸಭಾ ಚುನಾವಣೆಗೆ ನಡೆದ ಮತದಾನದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದ್ದು, ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 42 ಮಂದಿ ಸೋಂಕಿತರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. 
ಮತಹಕ್ಕು ಚಲಾಯಿಸಿದ ಕೊರೋನಾ ಸೋಂಕು ಪೀಡಿತ ವ್ಯಕ್ತಿ
ಮತಹಕ್ಕು ಚಲಾಯಿಸಿದ ಕೊರೋನಾ ಸೋಂಕು ಪೀಡಿತ ವ್ಯಕ್ತಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ನಡೆದ ಮತದಾನದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದ್ದು, ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 42 ಮಂದಿ ಸೋಂಕಿತರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. 

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 148 ಮಂದಿಯನ್ನು ಕೊರೋನಾ ಸೋಂಕಿತರು ಎಂದು ಗುರುತಿಸಲಾಗಿದ್ದು, ಕೇವಲ 4 ಮಂದಿ ಮಾತ್ರ ಕೊರೋನಾ ಸೋಂಕಿತರು ಮತದಾನ ಮಾಡಿದ್ದರೆ, ಶಿರಾ ಕ್ಷೇತ್ರದಲ್ಲಿ 143 ಸೋಂಕಿತರ ಪೈಕಿ ಮತಗಟ್ಟೆಗೆ ಆಗಮಿಸಿ 38 ಮಂದಿ ಸೋಂಕಿತರು ಅಂಚೆ ಮೂಲಕ ಮತ ಹಾಕಿದ್ದಾರೆ. 

ಆರ್.ಆರ್. ನಗರ ಕ್ಷೇತ್ರದಲ್ಲಿ ಮತಚಲಾಯಿಸಿದ 4 ಮತದಾರರು ಪುರುಷರಾಗಿದ್ದಾರೆ. ಶಿರಾದಲ್ಲಿ 38 ಮಂದಿಯ ಪೈಕಿ 22 ಮಂದಿ ಪುರುಷರು ಹಾಗೂ 6 ಮಂದಿ ಮಹಿಳೆಯರು ಮತ ಹಾಕಿದ್ದಾರೆ. 

ಸಂಜೆ 5 ಗಂಟೆಯಿಂದ 6 ಗಂಟೆಯವರೆಗೆ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುವ ಸೋಂಕಿತರಿಗೆ ಪಿಪಿಇ ಕಿಟ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ, ಮತಗಟ್ಟೆಯಲ್ಲಿ ಸೂಕ್ತ ವ್ಯವಸ್ಥೆಮಾಡಲಾಗಿತ್ತು. ವಿಧಾನಪರಿಷತ್'ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ವೇಳೆಯೂ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಕೇವಲ 3-4 ಮಂದಿ ಮಾತ್ರ ಸೋಂಕಿತರು ಮತಚಲಾಯಿಸಿದ್ದರು ಎಂದು ವರದಿಗಳು ತಿಳಿಸಿವೆ. 

6 ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಆಗಮಿಸಿ ಇಲ್ಲಿಯೇ ನೆಲೆಸಿರುವ ರಾಜೇಶ್ ಎಂಬುವವರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ನಿನ್ನೆ ರಾಜರಾಜೇಶ್ವರಿ ನ ಗರದಲ್ಲಿ ಮತಹಕ್ಕು ಚಲಾಯಿಸಿದ್ದಾರೆ. 

ರಾಜರಾಜೇಶ್ವರಿ ನಗರದಲ್ಲಿ ಕಡಿಮೆ ಮಟ್ಟದ ಮತದಾನ ನಡೆದಿರುವುದಕ್ಕೆ ರಾಜೇಶ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮತ ಚಲಾಯಿಸುವುದು ಪ್ರತೀಯೊಬ್ಬರ ಹಕ್ಕಾಗಿದೆ. ಮತದಾನ ಮಾಡದ ಜನರಿಗೆ ಪ್ರತಿನಿಧಿಗಳ ಪ್ರಶ್ನಿಸುವ ಹಕ್ಕು ಕೂಡ ಇಲ್ಲ ಎಂದು ಹೇಳಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ರಾಜೇಶ್ ಅವರಲ್ಲಿ ಜ್ವರ ಕಾಣಿಸಿಕೊಂಡಿದೆ. ಸಾಕಷ್ಟು ಔಷಧಿಗಳನ್ನು ಪಡೆದುಕೊಂಡರೂ ಕಡಿಮೆಯಾಗಿರಲಿಲ್ಲ. ನಂತರ ಕೊರೋನಾ ಪರೀಕ್ಷೆಗೊಳಗಾದಾಗ ಪಾಸಿಟಿವ್ ಬಂದಿತ್ತು. ಬಳಿಕ ಬಿಬಿಎಂಪಿ ಮೀಸಲಾತಿಯಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದೆರಡು ದಿನಗಳ ಹಿಂದಷ್ಟೇ ರಾಜೇಶ್ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 10 ದಿನಗಳ ಕಾಲ ಹೋಮ್ ಐಸೋಲೇಷನ್ ನಲ್ಲಿರುವಂತೆ ತಿಳಿಸಿದ್ದರು. ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮತ ಚಲಾಯಿಸುತ್ತೀರಾ ಎಂದು ಕೇಳಿದ್ದರು. ನಾನು ಹೌದು ಎಂದಿದ್ದೆ. ಬಳಿಕ ಮತದಾನದ ದಿನ ಅಧಿಕಾರಿಗಳು ನನಗೆ ಪಿಪಿಇ ಕಿಟ್ ನೀಡಿ, ಮತದಾನ ಕ್ಷೇತ್ರಕ್ಕೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದರು. ಇದಂತೂ ನಿಜಕ್ಕೂ ಮರೆಯಲಾಗದ ಕ್ಷಣ ಎಂದು ರಾಜೇಶ್ ತಿಳಿಸಿದ್ದಾರೆ. 

ಪಿಪಿಇ ಕಿಟ್'ನ್ನು ಕೇವಲ 40 ನಿಮಿಷಗಳ ಹಾಕಿಕೊಳ್ಳುವುದೇ ಕಷ್ಟಕರವಾಗಿತ್ತು. ಈ ವೇಳೆ ಉಸಿರುಗಟ್ಟುವಂತಹ ಅನುಭವ ಹಾಗೂ ಸಾಕಷ್ಟು ಬೆವರುತ್ತಿದ್ದೆ. ಈ ವೇಳೆ ನನಗೆ ವೈದ್ಯರು ಹಾಗೂ ನರ್ಸ್'ಗಳ ಕಷ್ಟವೇನೆಂಬುದು ತಿಳಿಯಿತು. ನಿಜಕ್ಕೂ ಅವರು ದೇವರುಗಳಿದ್ದಂತೆ. ಮತದಾನ ಕ್ಷೇತ್ರಕ್ಕೆ ತೆರಳಿದಾಗ ಅಧಿಕಾರಿಗಳು ಜನರನ್ನು ದೂರ ಇರುವಂತೆ ತಿಳಿಸುತ್ತಿದ್ದರು. ನನಗೇನು ನೋವಾಗಲಿಲ್ಲ. ಅವರ ಉದ್ದೇಶ ನನಗೆ ಅರ್ಥವಾಗಿತ್ತು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com