ಸಂಚಾರ ನಿಯಮ ಉಲ್ಲಂಘಿಸುತ್ತಿದ್ದೀರಾ? 3 ತಿಂಗಳು ನಿಮ್ಮ ಡ್ರೈವಿಂಗ್‌ ಲೈಸೆನ್ಸ್ ಅಮಾನತು ಗ್ಯಾರಂಟಿ‌!

ದಂಡ ತಾನೇ ಕಟ್ಟಿದರಾಯಿತು ಎಂದು ಹೆಲ್ಮೆಟ್ ಹಾಕದೆ ಸಂಚಾರ ನಿಮಯ ಉಲ್ಲಂಘನೆ ಮಾಡುತ್ತಿದ್ದೀರಾ...? ಈ ರೀತಿಯ ದುಸ್ಸಾಹಸಕ್ಕೆ ಇನ್ನು ಮುಂದೆ ಇಳಿದಿದ್ದೇ ಆದರೆ, 3 ತಿಂಗಳು ನಿಮ್ಮ ಚಾಲನಾ ಪರವಾನಗಿ ಅಮಾನತುಗೊಳ್ಳಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದಂಡ ತಾನೇ ಕಟ್ಟಿದರಾಯಿತು ಎಂದು ಹೆಲ್ಮೆಟ್ ಹಾಕದೆ ಸಂಚಾರ ನಿಮಯ ಉಲ್ಲಂಘನೆ ಮಾಡುತ್ತಿದ್ದೀರಾ...? ಈ ರೀತಿಯ ದುಸ್ಸಾಹಸಕ್ಕೆ ಇನ್ನು ಮುಂದೆ ಇಳಿದಿದ್ದೇ ಆದರೆ, 3 ತಿಂಗಳು ನಿಮ್ಮ ಚಾಲನಾ ಪರವಾನಗಿ ಅಮಾನತುಗೊಳ್ಳಲಿದೆ. 

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುವ ಬಗ್ಗೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸಾರಿಗೆ ಇಲಾಖೆ, ಇನ್ನು ಮುಂದೆ ಹೆಲ್ಮೆಟ್ ಹಾಕದೆ ಬೈಕ್ ಓಡಿಸುವವರ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಮೂರು ತಿಂಗಳು ರದ್ದು ಮಾಡಲು ಸೂಚನೆ ನೀಡಿದೆ. 

ಈಗಾಗಲೇ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 129ರ ಪ್ರಕಾರ ದ್ವಿಚಕ್ರವಾಹನ ಸವಾರರು ಹೆಲ್ಮೆಟ್‌ ಧರಿಸುವುದು ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 230 ಉಪನಿಯಮ(1)ರ ಅನ್ವಯ ರಾಜ್ಯದಲ್ಲಿ ದ್ವಿಚಕ್ರವಾಹನ ಸವಾರ ಹಾಗೂ ಹಿಂಬದಿ ಸವಾರ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದೀಗ ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರವು ದ್ವಿಚಕ್ರವಾಹನದಲ್ಲಿ ಪ್ರಯಾಣಿಸುವ ನಾಲ್ಕು ವರ್ಷ ಮೇಲ್ಪಟ್ಟವರೂ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವಂತೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಿದೆ.

ಆದೇಶದ ಪ್ರಕಾರ, ಚಾಲಕ ಹೆಲ್ಮೆಟ್‌ ಧರಿಸದಿದ್ದರೆ ಚಾಲನಾ ಪರವಾನಗಿ ಅಮಾನತುಗೊಳಿಸಲಾಗುತ್ತದೆ. ಹಿಂಬದಿ ಸವಾರ ಮತ್ತು ಮಕ್ಕಳು ಹೆಲ್ಮೆಟ್‌ ಧರಿಸದಿದ್ದರೆ ದಂಡ ಮಾತ್ರ ವಿಧಿಸಲಾಗುತ್ತದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಇನ್ನು ಮುಂದೆ ರಾಜ್ಯದಲ್ಲಿ ಹೆಲ್ಮೆಟ್‌ ಧರಿಸದೆ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ನಿಗದಿತ ದಂಡ ವಿಧಿಸುವುದರ ಜೊತೆಗೆ ಚಾಲನಾ ಪರವಾನಗಿಯನ್ನು ಕನಿಷ್ಠ ಮೂರು ತಿಂಗಳ ಕಾಲ ಅಮಾನತುಗೊಳಿಸುವ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಾರಿಗೆ ಇಲಾಖೆ ಆಯುಕ್ತರು ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಿದ್ದಾರೆ. 

ಅಂತೆಯೇ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ದಾಖಲಾದ ಪ್ರಕರಣಗಳ ಸಂಖ್ಯೆ, ಪೊಲೀಸ್‌ ಠಾಣೆಗಳಿಂದ ಬಂದ ಪ್ರಕರಣಗಳ ಸಂಖ್ಯೆ ಹಾಗೂ ಅಮಾನತು ಮಾಡಿದ ಚಾಲನಾ ಪರವಾನಗಿಗಳ ಸಂಖ್ಯೆಯನ್ನು ಜಂಟಿ ಸಾರಿಗೆ ಆಯುಕ್ತರು ಹಾಗೂ ಅಪರ ಸಾರಿಗೆ ಆಯುಕ್ತರಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. 

ಕೇವಲ ದ್ವಿಚಕ್ರ ಸವಾರರಿಗಷ್ಟೇ ಅಲ್ಲದೆ, ಹೆಚ್ಚೆಚ್ಚು ಸೌಂಡ್ ಗಳನ್ನು ಮಾಡುವ ವಾಹನಗಳು, ಮ್ಯಾಕ್ಸಿ ಕ್ಯಾಬ್ ಹಾಗೂ ಪರವಾನಗಿ ಇಲ್ಲದೆ ಮತ್ತು ಹೆಚ್ಚೆಚ್ಚು ಸರಕುಗಳನ್ನು ಸಾಗಿಸುವ ವಾಹನಗಳು, ಗ್ರಾಹಕರಿಗೆ ಹೆಚ್ಚೆಚ್ಚು ಶುಲ್ಕ ವಿಧಿಸುವ ಆಟೋ ರಿಕ್ಷಾ ಚಾಲಕರಿಗೂ ಈ ನಿಯಮ ಅನ್ಯವಾಗಲಿದೆ ಎಂದು ಹೇಳಲಾಗುತ್ತಿದೆ. 

ಮಾಲಿನ್ಯದ ಬಗ್ಗೆ ಜಾಗೃತಿ ಅಭಿಯಾನ ಶೀಘ್ರದಲ್ಲೇ...
ನವೆಂಬರ್'ನ್ನು ‘ಮಾಲಿನ್ಯ ಜಾಗೃತಿ ತಿಂಗಳು' ಎಂದು ಆಚರಿಸುವುದರಿಂದ ಮುಂದಿನ ದಿನಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನೂ ನಡೆಸಲಾಗುತ್ತದೆ. 

“ಪ್ರತಿದಿನ ಬೆಳಿಗ್ಗೆ, ವಿಶೇಷ ಪಡೆಗಳು ಎಲ್ಲಾ ಉಲ್ಲಂಘನೆಗಳನ್ನು ಆರ್‌ಟಿ ಓಸ್‌ಗೆ ವರದಿ ಮಾಡುತ್ತವೆ ಮತ್ತು ಪರವಾನಗಿಗಳನ್ನು ಅಮಾನತುಗೊಳಿಸಲಾಗುತ್ತದೆ.ಪ್ರತಿ ತಿಂಗಳ 5ನೇ ತಾರೀಖಿನೊಳಗೆ ದಾಖಲಾದ ಪ್ರಕರಣಗಳ ಸಂಖ್ಯೆ, ಪೊಲೀಸ್‌ ಠಾಣೆಗಳಿಂದ ಬಂದ ಪ್ರಕರಣಗಳ ಸಂಖ್ಯೆ ಹಾಗೂ ಅಮಾನತು ಮಾಡಿದ ಚಾಲನಾ ಪರವಾನಗಿಗಳ ಸಂಖ್ಯೆಯನ್ನು ಜಂಟಿ ಸಾರಿಗೆ ಆಯುಕ್ತರು ಹಾಗೂ ಅಪರ ಸಾರಿಗೆ ಆಯುಕ್ತರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com