ನ.17ಕ್ಕೆ ಕಾಲೇಜು ಆರಂಭ: ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆ, 8 ತಿಂಗಳಿಂದ ಸಂಬಳವಿಲ್ಲ!

ಕೋವಿಡ್-19 ಸೋಂಕಿನ ತೀವ್ರತೆ ಕೊಂಚ ತಗ್ಗಿರುವ ಸಂದರ್ಭದಲ್ಲಿ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಸೋಂಕಿನ ತೀವ್ರತೆ ಕೊಂಚ ತಗ್ಗಿರುವ ಸಂದರ್ಭದಲ್ಲಿ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ತರಗತಿಗಳಲ್ಲಿ ವಿದ್ಯಾರ್ಥಿಗಳು ಶಾರೀರಿಕ ಅಂತರ ಕಾಯ್ದುಕೊಂಡು ಉಪನ್ಯಾಸಕರು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಕಾಲೇಜುಗಳಿಗೆ ಬರಲು ಸಿದ್ಧತೆಗಳು ನಡೆಯುತ್ತಿವೆ. ಈ ಮದ್ಯೆ ಸರ್ಕಾರಿ ಕಾಲೇಜುಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉಪನ್ಯಾಸಕರುಗಳು ಇಲ್ಲ, ಈ ಕೊರತೆಯನ್ನು ಸರ್ಕಾರ ಕೂಡ ಅವಧಿಗೆ ಮುನ್ನವೇ ಬಗೆಹರಿಸಿಲ್ಲ, ಇದರಿಂದ ಸಾಕಷ್ಟು ತೊಂದರೆಯುಂಟಾಗುವ ಸಾಧ್ಯತೆಯಿದೆ. 

ಕಳೆದ ಮಾರ್ಚ್ ತಿಂಗಳಿನಿಂದ ಸುಮಾರು 14,500 ಅತಿಥಿ ಉಪನ್ಯಾಸಕರಿಗೆ ವೇತನವನ್ನೇ ನೀಡಿಲ್ಲ, ಸಾವಿರಕ್ಕೂ ಅಧಿಕ ಖಾಯಂ ಉಪನ್ಯಾಸಕರನ್ನು ರಾಜ್ಯದ 428 ಸರ್ಕಾರಿ ಕಾಲೇಜುಗಳಿಗೆ ಇನ್ನೂ ಸರ್ಕಾರ ನೇಮಕಾತಿ ಮಾಡಿಕೊಂಡಿಲ್ಲ.ಇವರಲ್ಲಿ ಬಹುತೇಕ ಮಂದಿ ಉಪನ್ಯಾಸಕರು ಭಾಷೆ ಮತ್ತು ಕಾಮರ್ಸ್ ಲೆಕ್ಚರರ್ ಗಳಾಗಿದ್ದಾರೆ.

ಖಾಯಂ ಉಪನ್ಯಾಸಕರಿಗೆ ಎದುರಾಗಿ ಅತಿಥಿ ಉಪನ್ಯಾಸಕರ ಅನುಪಾತ 2:1ರಲ್ಲಿದೆ ಎನ್ನುತ್ತಾರೆ ಕರ್ನಾಟಕ ಸರ್ಕಾರಿ ಕಾಲೇಜುಗಳ ಶಿಕ್ಷಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೆಚ್ ಬಿ ನಾರಾಯಣ. ರಾಜ್ಯದಲ್ಲಿ ಈಗ ಸುಮಾರು 7 ಸಾವಿರ ಖಾಯಂ ಉಪನ್ಯಾಸಕರಿದ್ದಾರೆ. ಪಟ್ಟಣ, ಅರೆ ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿದ್ದಾರೆ. ಕಳೆದ 8 ತಿಂಗಳಿನಿಂದ ವೇತನ ನೀಡದಿರುವುದರಿಂದ ಅವರು ಮತ್ತೆ ಕೆಲಸಕ್ಕೆ ಬರುತ್ತಾರೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿಯಿಲ್ಲ. 

ಉಪನ್ಯಾಸಕರಾಗಿದ್ದವರು ವೇತನ ಸಿಗದೆ ಬೇರೆ ಕೆಲಸಕ್ಕೆ ಕೂಡ ಹೋಗುತ್ತಿದ್ದಾರೆ, ಕೆಲವರು ತರಕಾರಿ ಮಾರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವ ಸುಮಾ(ಹೆಸರು ಬದಲಿಸಲಾಗಿದೆ). ಕಳೆದ 8 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವ ಸಮಾರಂತಹ ಅನೇಕ ಉಪನ್ಯಾಸಕರು ಹಣಕಾಸಿನ ಮತ್ತು ಉದ್ಯೋಗದ ಸ್ಥಿರತೆಗಾಗಿ ಕಾಯುತ್ತಿದ್ದಾರೆ.

ಇನ್ನು ಕಾಲೇಜು ದಿನ ಆರಂಭವಾಗಲು ಕೇವಲ 6 ದಿನಗಳಷ್ಟೆ ಬಾಕಿ. ಕೋವಿಡ್-19 ಶಿಷ್ಟಾಚಾರದ ನಡುವೆ ಶಿಫ್ಟ್ ಗಳಲ್ಲಿ ಕೆಲಸ ಮಾಡುವುದು ಹೇಗೆ, ಉಪನ್ಯಾಸಕರ ಕೊರತೆಯಿರುವಾಗ ಹೇಗೆ ತರಗತಿಗಳನ್ನು ನಡೆಸುತ್ತಾರೆ ಎಂಬ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯಿಂದಲೂ ಸ್ಪಷ್ಟತೆಯಿಲ್ಲ. ಉಪನ್ಯಾಸಕರ ನೇಮಕಕ್ಕೆ ಕಾಲೇಜು ಶಿಕ್ಷಣಗಳ ಇಲಾಖೆ ಹಣಕಾಸು ಇಲಾಖೆಯ ಒಪ್ಪಿಗೆಗಾಗಿ ಕಾಯುತ್ತಿದೆ. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಪಿ, ವಿಶೇಷ ನೇಮಕಾತಿ ನಿಯಮಗಳನ್ನು ಅಂತಿಮಗೊಳಿಸಲಾಗಿದ್ದು, ಕೊರೋನಾದಿಂದಾಗಿ ಅದರ ಕಾರ್ಯ ಸ್ಥಗಿತಗೊಂಡಿದೆ. ಉನ್ನತ ಶಿಕ್ಷಣ ಇಲಾಖೆ ಹಣಕಾಸು ಇಲಾಖೆಯಿಂದ ಈಗಾಗಲೇ ವಿಶೇಷ ಅನುಮತಿ ಕೋರಿದ್ದು ಅದರ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com