ಚುನಾವಣೆಗಳಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಏರಿಕೆಯಾಗಿಲ್ಲ: ವರದಿ

ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಏರಿಕೆಯಲ್ಲಿ ಚುನಾವಣೆಯು ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ತಾಂತ್ರಿಕಾ ಸಲಹಾ ಸಮಿತಿಯು ವರದಿಯಲ್ಲಿ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಏರಿಕೆಯಲ್ಲಿ ಚುನಾವಣೆಯು ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ತಾಂತ್ರಿಕಾ ಸಲಹಾ ಸಮಿತಿಯು ವರದಿಯಲ್ಲಿ ತಿಳಿಸಿದೆ.

ಕೆಲ ದಿನಗಳ ಹಿಂದಷ್ಟೇ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಉಪಚುನಾವಣೆ ನಡೆದಿತ್ತು. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಮೂರು ಪಕ್ಷಗಳಾಗಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಭರ್ಜರಿ ಪ್ರಚಾರ ನಡೆಸಿದ್ದವು. ಈ ವೇಳೆ ಕೊರೋನಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿತ್ತು. ಸಾಕಷ್ಟು ರಾಜಕೀಯ ನಾಯಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. 

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಚುನಾವಣೆ ನಡೆದಿದ್ದ ಈ ಎರಡೂ ಕ್ಷೇತ್ರಗಳಲ್ಲಿ ಬಿಬಿಎಂಪಿ ರ್ಯಾಪಿಡ್ ಟೆಸ್ಟ್ ಗಳನ್ನು ನಡೆಸಿತ್ತು. ಎರಡು ಹಂತಗಳಲ್ಲಿ ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳು, ಕಂದಾಯ ಮತ್ತು ಎಂಜಿನಿಯರಿಂಗ್ ಸಿಬ್ಬಂದಿ, ಪೊಲೀಸ್, ಆರೋಗ್ಯ ಕಾರ್ಯಕರ್ತರು, ಬಿಎಂಟಿಸಿ ಮತ್ತು ಇತರ ವಾಹನ ಚಾಲಕರು ಮತ್ತು ಎಂಸಿಸಿ ತಂಡವನ್ನು ಹಾಗೂ ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವ ಜನರನ್ನೂ ಕೂಡ ಪರೀಕ್ಷೆಗೊಳಪಡಿಸಲಾಗಿತ್ತು. ಇದೀಗ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಏರಿಕೆಯಲ್ಲಿ ಚುನಾವಣೆಯು ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ತಾಂತ್ರಿಕಾ ಸಲಹಾ ಸಮಿತಿಯು ಬಿಬಿಎಂಪಿಗೆ ವರದಿ ಸಲ್ಲಿಸಿದೆ. 

ನವೆಂಬರ್ 10 ರ ವೇಳೆಗೆ ಶಿರಾ ಮತ್ತು ಆರ್.ಆರ್.ನಗರದಲ್ಲಿ (ಟಿಪಿಆರ್) ಟೆಸ್ಟ್ ಪಾಸಿಟಿವಿಟಿ ದರವು ರಾಜ್ಯದ ಟಿಪಿಆರ್ (2.15%) ಗಿಂತ ಕಡಿಮೆಯಾಗಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. 

ಆರ್.ಆರ್.ನಗರದಲ್ಲಿ 14,727 ಜನರನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 84  (ಶೇ.0.57) ಮಂದಿ ಸೋಂಕಿಗೊಳಗಾಗಿರುವುದು ಕಂಡು ಬಂದಿದೆ. ಇದರಲ್ಲಿ 2,310 ಚುನಾವಣಾ ಅಧಿಕಾರಿಗಳಿದ್ದು, ಅವರಲ್ಲಿ ಆರು (0.26%)  ಮಂದಿ ಸೋಂಕು ದೃಢಪಟ್ಟಿದೆ. 287 ಪೊಲೀಸ್ ಅಧಿಕಾರಿಗಳನ್ನೂ ಪರೀಕ್ಷೆಗೊಳಪಡಿಸಲಾಗಿದ್ದು, ಯಾರಲ್ಲೂ ಕೊರೋನಾ ಸೋಂಕು ಪತ್ತೆಯಾಗಿಲ್ಲ.  

ಶಿರಾ ಕ್ಷೇತ್ರದಲ್ಲಿ 15,874 ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 103 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. 

ಈ ಎಲ್ಲಾ ವರದಿಗಳ ಬಳಿಕ ಇದೀಗ ಚುನಾವಣಾ ಆಯೋಗ ಮತ್ತು ಬಿಬಿಎಂಪಿಯ ತಾಂತ್ರಿಕ ಸಲಹಾ ಸಮಿತಿಯು ಈ ಎರಡು ಕ್ಷೇತ್ರಗಳಲ್ಲಿ ಚುನಾವಣೆಗಳಿಂದ ರಾಜ್ಯ ಕೊರೋನಾ ಪ್ರಕರಣಗಳ ಏರಿಕೆಯಲ್ಲಿ ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com