ರೈತರೊಂದಿಗೆ ಒಂದು ದಿನ: ಹೊಸ ಯೋಜನೆ ಘೋಷಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್

ನಾಡಿನ ಬೆನ್ನೆಲುಬೆನಿಸಿದ ರೈತರ ಬದುಕನ್ನು ಇನ್ನಷ್ಟು ಹಸನು ಮಾಡಲು, ಅವರ ಸಂಕಷ್ಟ ಸಮಸ್ಯೆಗಳನ್ನು ಖುದ್ದಾಗಿ ಕೇಳಿ ಪರಿಹರಿಸುವ ಮೂಲಕ ಅನ್ನದಾತನದಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕೃಷಿ ಸಚಿವ ಬಿ.ಸಿ.ಪೀಟಲ್ ರೈತರೊಂದಿಗೆ ಒಂದು ದಿನ ಎಂಬ ವಿನೂತನ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. 
ಬಿಸಿ ಪಾಟೀಲ್
ಬಿಸಿ ಪಾಟೀಲ್

ಬೆಂಗಳೂರು: ನಾಡಿನ ಬೆನ್ನೆಲುಬೆನಿಸಿದ ರೈತರ ಬದುಕನ್ನು ಇನ್ನಷ್ಟು ಹಸನು ಮಾಡಲು, ಅವರ ಸಂಕಷ್ಟ ಸಮಸ್ಯೆಗಳನ್ನು ಖುದ್ದಾಗಿ ಕೇಳಿ ಪರಿಹರಿಸುವ ಮೂಲಕ ಅನ್ನದಾತನದಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕೃಷಿ ಸಚಿವ ಬಿ.ಸಿ.ಪೀಟಲ್ ರೈತರೊಂದಿಗೆ ಒಂದು ದಿನ ಎಂಬ ವಿನೂತನ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. 

ರೈತರ ಜೊತೆ ಇಡೀ ದಿನ ಕಳೆದು ಅವರ ನೋವು-ನಲಿವು ಆಶಯಗಳನ್ನು ಅರಿತು ಅವುಗಳನ್ನು ಆಡಳಿತದಲ್ಲಿ ಅನ್ವಯ ಮಾಡಿಕೊಳ್ಳುವ ಉದ್ದೇಶದೊಂದಿಗೆ ರೂಪಿಸಲಾಗಿರುವ ಯೋಜನೆಗೆ ಬಿ.ಸಿ.ಪಾಟೀಲ್ ಅವರ ಜನ್ಮ ದಿನವಾದ ನ.14ರಂದು ಚಾಲನೆ ದೊರೆಯಲಿದೆ. 

ನ.14ರಂದು ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಇಡೀ ದಿನ ವಿವಿಧ ಕೃಷಿ ಸಂಬಂಧಿ ಚಟುವಟಿಕೆ ನಡೆಸುವ ಮೂಲಕ ನೂತನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್ ಅವರು, ನಾನು ಅಭಿನಯಿಸಿದ್ದ ಕೌರವ ಚಿತ್ರವನ್ನು ಮಂಡ್ಯದಲ್ಲಿಯೇ ಚಿತ್ರೀಕರಣ ನಡೆಸಲಾಗಿತ್ತು. ಇಲ್ಲಿಂದ ನನಗೆ ಸಾಕಷ್ಟು ಹೆಸರು ಬಂದಿತ್ತು. ಮಂಡ್ಯದ ಜನರು ಈಗಲು ನನ್ನನ್ನು ಕೌರವ ಎಂದೇ ಕರೆಯುತ್ತಾರೆ. ವರದಿಗಳ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿಯೇ ಸಾಕಷ್ಟು ಸಂಖ್ಯೆಯ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಲ್ಲಿಯೇ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ತಡವಾಗಿತ್ತು ಎಂದು ಹೇಳಿದ್ದಾರೆ. 

ಯುವಕರನ್ನು ಕೃಷಿ ಕಡೆಗೆ ಆಕರ್ಷಿಸಿ, ಕೃಷಿಯಲ್ಲಿ ನವೋದ್ಯಮಗಳನ್ನು ಗ್ರಾಮೀಣ ಪ್ರದೇಶದಲ್ಲಿ ಆರಂಫಿಸಲು ಪ್ರೋತ್ಸಾಹಿಸಲು, ಆಧುನಿಕ ಕೃಷಿ ಪದ್ಧತಿ ಅಳವಡಿಕೆ, ಆದಾಯದ ಮೂಲ ಹೆಚ್ಚಿಸಿಕೊಳ್ಳಲು ಸಮಗ್ರ ಕೃಷಿ ಪದ್ಧತೆ ಅಳವಡಿಸಿಕೊಳ್ಳಲು ರೈತರಿಗೆ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ. ರೈತರ ಆತ್ಮಹತ್ಯೆ ತಡೆಗಟ್ಟಲು ಅವರ ಮನೋಬಲ ಹೆಚ್ಚಿಸಲು ಸೂಕ್ತ ಕ್ರಮಕೈಗೊಳ್ಳುವುದು, ರೈತರ ಸಮಸ್ಯೆಗಲನ್ನು ಆಲಿಸಿ, ಸ್ಥಳದಲ್ಲೇ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಸಾಧ್ಯವಾದಷ್ಟು ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ. 

ಈಗಾಗಲೇ ಸಾಕಷ್ಟು ಯಶಸ್ಸು ಗಳಿಸಿರುವ ರೈತರನ್ನು ಕರೆಯಿಸಿ ಸ್ಥಳೀಯ ರೈತರಿಗೆ ಕೃಷಿ ವಿಧಾನಗಳ ಬಗ್ಗೆ ಹಾಗೂ ಇತರೆ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗುತ್ತದೆ. ನಾನು ಉತ್ತಕ ಕರ್ನಾಟಕದವನಾಗಿದ್ದು, ಮಂಡ್ಯ ಜನರು ರಾಗಿ ಮುದ್ದೆಗೆ ಫೇಮಸ್ ಆಗಿದ್ದಾರೆ. ನಮ್ಮ ಭಾಗ ಆಹಾರ ಸೇವನೆಯನ್ನೂ ಅವರಿಗೆ ತಿಳಿಸಿಕೊಡೋಣ. ಕಾರ್ಯಕ್ರಮಕ್ಕೆ ಚಾಲನೆ ನೀಡುವ ವೇಳೆ 2,500 ಜೋಳದ ರೊಟ್ಟಿಗಳನ್ನು ವಿತರಿಸುತ್ತೇವೆ. ರೈತರೊಂದಿಗೊಂದು ದಿನ ಕಾರ್ಯಕ್ರಮದ ಬಳಿಕ ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಕೃಷಿ ಇಲಾಖೆಯಲ್ಲಿ ಹೊಸ ಬದಲಾವಣೆ ಮಾಡಲಾಗುವುದು. ರೈತರಿಗೆ ತಾತ್ಕಾಲಿಕ ಪರಿಹಾರ ನೀಡುವುದಕ್ಕಿಂತ ಶಾಶ್ವತ ಪರಿಹಾರ ನೀಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈತರ ಸಮಸ್ಯೆ ಅರಿಯಲು ಇದೊಂದು ಹೊಸ ಪ್ರಯತ್ನವಾಗಿದೆ ಎಂದು ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com