ಐಎಂಎ ಹಗರಣ: ಹಣ ವಾಪಾಸಾತಿಗೆ ಪ್ರಕ್ರಿಯೆ ಆರಂಭ, ನ.25 ರಿಂದ ಅನ್ ಲೈನ್ ಅರ್ಜಿ ಆಹ್ವಾನ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ಹಣ ವಾಪಸ್ ಕೊಡಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ನ.25ರಿಂದ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ...
ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ (ಸಂಗ್ರಹ ಚಿತ್ರ)
ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ (ಸಂಗ್ರಹ ಚಿತ್ರ)

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ಹಣ ವಾಪಸ್ ಕೊಡಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ನ.25ರಿಂದ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಐಎಂಎ ಹಗರಣದ ಸಕ್ಷಮ ಪ್ರಾಧಿಕಾರ ಹಾಗೂ ವಿಶೇಷ ಅಧಿಕಾರಿ ಹರ್ಷಗುಪ್ತ ಅವರು ಶುಕ್ರವಾರ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಠೇವಣಿದಾರರು ಡಿಸೆಂಬರ್ 24ರೊಳಗಾಗಿ ಅರ್ಜಿ ಸಲ್ಲಿಸಬೇಕು. ಎರಡು ಹಂತದಲ್ಲಿ ಅರ್ಜಿ ಸಲ್ಲಿಕೆ ಅವಕಾಶವಿದ್ದು, ಮೊದಲ ಹಂತದಲ್ಲಿ ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಗಳನ್ನು ನೀಡಬೇಕು, 2ನೇ ಹಂತದಲ್ಲಿ ಐಎಂಎಗೆ ಹಣ ಹೂಡಿದ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.

ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಬೆಂಗಳೂರು 1, ಕರ್ನಾಟಕ 1, ಅಟಲ್ ಜಿ ಜನಸ್ನೇಹಿ ಕೇಂದ್ರ ಅಥವಾ ಖುದ್ದಾಗಿ ತಾವೇ ಆನ್ಲೈ ನ್ ಅರ್ಜಿಗಳನ್ನು ಸಲ್ಲಿಸುವಂತೆ ಸಲಹೆ ನೀಡಿದರು. 

ಸುಮಾರು ಒಂದು ಲಕ್ಷ ಠೇವಣಿದಾರರು 2,900 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಇದರಲ್ಲಿ 1500 ಕೋಟಿ ರೂ.ಗಳನ್ನು ಲಾಭಾಂಶದ ಮಾದರಿಯ್ಲಲಿ ಐಎಂಎ ಕಾಲಕಾಲಕ್ಕೆ ಠೇವಣಿದಾರರಿಗೆ ನೀಡುತ್ತಾ ಬಂದಿದೆ. 2012ರ ಆಜುಬಾಜಿನಲ್ಲಿ ಹೂಡಿಕೆ ಮಾಡಿರುವವರ ಪೈಕಿ ಬಹುತೇಕರಿಗೆ ತಮ್ಮ ಅಸಲಿಗಿಂತಲೂ ಹೆಚ್ಚಿನ ಹಣ ಸಂದಾಯವಾಗಿದೆ. ಇನ್ನು 1400 ಕೋಟಿ ರೂ.ಗಳನ್ನು ಠೇವಣಿದಾರರಿಗೆ ವಾಪಸ್ ಕೊಡಿಸಬೇಕಿದೆ ಎಂದು ತಿಳಿಸಿದರು.

ಪ್ರಸ್ತತ ಸಂದರ್ಭದಲ್ಲಿ ಐಎಂಎ ಮುಖ್ಯಸ್ಥ ಮನ್ಸೂರ್ ಆಲಿಖಾನ್ ಇತರ ಅಧಿಕಾರಿಗಳು ಮತ್ತು ಅವವ್ಯಹಾರದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಿ ಠೇವಣಿದಾರರಿಗೆ ಹಣ ವಾಪಸ್ ನೀಡಲು ನಿರ್ಧರಿಸಲಾಗಿದೆ. 

ಇದು ಸರಿಸುಮಾರು 475 ಕೋಟಿ ರೂ.ಗಳಷ್ಟಾಗಬಹುದು. ಹಾಗಾಗಿ ಎಲ್ಲಾ ಠೇವಣಿದಾರರಿಗೂ ಹಣ ನೀಡಲಾಗುವುದಿಲ್ಲ. ಸಣ್ಣ ಠೇವಣಿದಾರರಿಗೆ ಆದ್ಯತೆ ನೀಡುವುದು ಅಥವಾ ಎಲ್ಲಾ ಠೇವಣಿದಾರರಿಗೂ ಶೇಕಡವಾರು ಪ್ರಮಾಣದಲ್ಲಿ ಹಣ ನೀಡುವ ಸಾಧ್ಯಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. 

ಪ್ರಕರಣದ ವಿಚಾರಣೆಗಾಗಿ ಸಿಟಿ ಸಿವಿಲ್ ನ್ಯಾಯಾಲಯದ ಕೊಠಡಿ ಸಂಖ್ಯೆ 4ರಲ್ಲಿ ಐಎಂಎಗಾಗಿಯೇ ಪ್ರತ್ಯೇಕವಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಪ್ರತಿ ವಾರಕ್ಕೊಮ್ಮೆ ವಿಚಾರಣೆ ನಡೆಯುತ್ತಿದೆ. ಹಗರಣದಲ್ಲಿ ಭಾಗಿಯಾದ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಗ್ರಾಮ ಲೆಕ್ಕಿಗ ಹಾಗೂ ಮತ್ತೊಬ್ಬ ಅಧಿಕಾರಿಯ ಪತ್ನಿಯ ಹೆಸರಿನಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ.

ಹಗರಣದಲ್ಲಿ ಹೆಸರು ಕೇಳಿಬಂದಿರುವ ಪೊಲೀಸ್ ಅಧಿಕಾರಿಗಳ ಆಸ್ತಿ ಮುಟ್ಟುಗೋಲಿನ ಬಗ್ಗೆ ಈವರೆಗೆ ಯಾವುದೇ ನಿರ್ಧಾರಗಳು ಆಗಿಲ್ಲ. ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅವರು ಸಲ್ಲಿಸುವ ವರದಿ ಆಧರಿಸಿ ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳುತ್ತದೆ. ನ್ಯಾಯಾಲಯ ನಿರ್ಧರಿಸಿದ ಮೇಲೆ ಆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಿ ಹೂಡಿಕೆದಾರರಿಗೆ ಹಣ ಕೊಡಿಸುವುದಷ್ಟೇ ನಮ್ಮ ಕೆಲಸ ಎಂದು ಹೇಳಿದರು.

ಈ ಎಲ್ಲ ಪ್ರಕ್ರಿಯೆಗಳಿಗೆ ಸರಿಸುಮಾರು ಆರು ತಿಂಗಳು ಆಗಬಹುದು. ನ್ಯಾಯಾಲಯದ ತಗಾದೆಗಳು ಹೆಚ್ಚು ದಿನ ನಡೆದರೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಸದ್ಯದ ಪರಿಸ್ಥಿತಿ ಪ್ರಕಾರ 475 ಕೋಟಿ ರೂ.ಗಳ ಆಸ್ತಿ ಲೆಕ್ಕ ಸಿಕ್ಕಿದೆ. ಅದರಲ್ಲಿ ಐಎಂಎ ಮತ್ತು ಅದರ ನಿರ್ದೇಶಕ ಮಂಡಳಿಯವರ ಆಸ್ತಿ ಶೇ.80ರಷ್ಟಿದೆ. ಉಳಿದದ್ದು ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳ ಆಸ್ತಿಗಳಾಗಿವೆ ಎಂದು ವಿವರಿಸಿದರು. 

ಆನ್ಲೈನ್ ಅರ್ಜಿ ಸಲ್ಲಿಸುವ ವೇಳೆ ಐಎಂಎ ಜೊತೆ ಆರ್ಥಿಕ ವ್ಯವಹಾರ ಮಾಡಿದ ಬ್ಯಾಂಕ್‍ ಖಾತೆ ಚಾಲ್ತಿಯಲ್ಲಿದ್ದರೆ ಅದನ್ನೇ ಅಧಿಕೃತ ಎಂದು ಪರಿಗಣಿಸಲಾಗುವುದು. ಒಂದು ವೇಳೆ ಖಾತೆ ನಿಷ್ಕ್ರಿಯವಾಗಿದ್ದರೆ ಠೇವಣಿಪತ್ರ, ಷೇರುಪ್ರಮಾಣ ಪತ್ರದಂತಹ ದಾಖಲಾತಿಗಳ ಅಗತ್ಯವಿದೆ. 

ಅರ್ಜಿ ಸಲ್ಲಿಸುವವರ ಮಾಹಿತಿಗಳನ್ನು ಐಎಂಎ ಸಂಸ್ಥೆಯಲ್ಲಿರುವ ದತ್ತಾಂಶಗಳೊಂದಿಗೆ ಹೊಂದಾಣಿಕೆ ಮಾಡಲಾಗುವುದು. ಆಧಾರ್ ಕಾರ್ಡ್, ಇತರ ಮಾಹಿತಿಗಳನ್ನು ಸಮೀಕರಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುವುದು. ಒಂದು ವೇಳೆ ಫಲಾನುಭವಿಗಳು ಮೃತಪಟ್ಟಿದ್ದರೆ ಅಥವಾ ಕೋವಿಡ್ ನಂತಹ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಠೇವಣಿದಾರರು ಸೂಚಿಸಿರುವ ನಾಮನಿರ್ದೇಶಿತ ವ್ಯಕ್ತಿಗಳು ಕ್ಲೈಮ್‍ ಗಾಗಿ ಅರ್ಜಿ ಸಲ್ಲಿಸಬಹುದು. 

ನಾಮನಿರ್ದೇಶಿತ ವ್ಯಕ್ತಿಗಳು ಬದುಕಿಲ್ಲವೆಂದಾದರೆ ಅವರ ಕಾನೂನು ಬದ್ದ ಹಕ್ಕುದಾರರು ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಈ ಸಂದರ್ಭದಲ್ಲಿ ಸೂಕ್ತ ದಾಖಲಾತಿಗಳ ಅಗತ್ಯವಿದೆ. ಅವಧಿ ಮೀರಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಠೇವಣಿದಾರರು ಆನ್ ಲೈನ್ ಅರ್ಜಿಗಳನ್ನು ಆಧಾರ್ ಮೂಲಕ ಅಥವಾ ತಮ್ಮ ಬ್ಯಾಂಕ್ ಖಾತೆಯಿಂದ ಸಮಕ್ಷಮ ಪ್ರಾಧಿಕಾರ ಬ್ಯಾಂಕ್ ಖಾತೆಗೆ ರೂ. 1ನ್ನು ವರ್ಗಾಯಿಸಿದ ಯುಪಿಆರ್ ಸಂಖ್ಯೆ ಮೂಲಕ ಸಲ್ಲಿಸಬಹುದು. ಸಕ್ಷಮ ಪ್ರಾಧಿಕಾರದ ಬ್ಯಾಂಕ್ ಸಂಖ್ಯೆ 6442116442 ಮತ್ತು ಐಎಫ್‍ ಎಸ್‍ ಸಿ ಕೋಡ್ ಎಚ್‍ ಡಿಎಫ್‍ ಸಿ ಬ್ಯಾಂಕ್ 0001748 ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com