ರಾಜಕೀಯ ನಾಯಕರ ವಿರುದ್ಧದ ಕ್ರಿಮಿನಲ್ ಕೇಸ್ ವಾಪಸ್ ಪಡೆದಿದ್ದರ ಕುರಿತು ಸಮರ್ಥನೆ ನೀಡಿ: ಸರ್ಕಾರಕ್ಕೆ ಹೈಕೋರ್ಟ್
ರಾಜಕೀಯ ನಾಯಕರ ವಿರುದ್ಧದ ಕ್ರಿಮಿನಲ್ ಕೇಸ್'ಗಳನ್ನು ವಾಪಸ್ ಪಡೆದಿದ್ದರ ಕುರಿತು ಸಮರ್ಥನೆ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
Published: 13th November 2020 08:43 AM | Last Updated: 13th November 2020 08:43 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜಕೀಯ ನಾಯಕರ ವಿರುದ್ಧದ ಕ್ರಿಮಿನಲ್ ಕೇಸ್'ಗಳನ್ನು ವಾಪಸ್ ಪಡೆದಿದ್ದರ ಕುರಿತು ಸಮರ್ಥನೆ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಶಾಸಕರು, ಎಂಎಲ್'ಸಿಗಳು ಹಾಗೂ ಅವರು ಅನುಯಾಯಿಗಳ ವಿರುದ್ಧ 2014ರಿಂದ 2020ರ ಮೇ ತಿಂಗಳ ವರೆಗೂ ದಾಖಲಾಗಿದ್ದ ಕ್ರಿಮಿನಲ್ ಕೇಸ್ ಗಳನ್ನು ಹಿಂಪಡೆದಿದ್ದರ ಕುರಿತು ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಈ ವೇಳೆ ಶಾಸಕರು ಹಾಗೂ ಸಚಿವರ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಈ ಕುರಿತು ಸಮರ್ಥನೆ ನೀಡುವಂತೆ ತಿಳಿಸಿದೆ.
ಪ್ರತಿವಾದಿಗಳಾದ ಸರ್ಕಾರ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಅಭಿಯೋಜನೆ ನಿರ್ದೇಶನಾಲಯ ನಿರ್ದೇಶಕರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಅರ್ಜಿಗೆ ಡಿ.9ರೊಳಗೆ ಆಕ್ಷೇಪಣೆ ಸಲ್ಲಿಸುವಂತೆಯೂ ಎಲ್ಲಾ ಪ್ರತಿವಾದಿಗಳಿಗೆ ಸೂಚಿಸಿದೆ.