ಹಸಿರು ಪಟಾಕಿಯಿಂದಲೂ ಕಣ್ಣಿಗೆ ಹಾನಿ ತಪ್ಪಿದ್ದಲ್ಲ: ಮಿಂಟೋ ಆಸ್ಪತ್ರೆ ವೈದ್ಯರ ಎಚ್ಚರಿಕೆ

ಹಸಿರು ಪಟಾಕಿಗಳಲ್ಲೂ ರಸಾಯನಿಕ ಅಂಶ ಇದ್ದು, ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಹಾಗಾಗಿ, ಬೆಳಕಿನ ಹಬ್ಬ ದೀಪಾವಳಿ ದಿನದಂದು ಪಟಾಕಿ ಸಿಡಿಸುವಾಗ ಮೈಮರೆಯಬೇಡಿ ಎಂದು ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಸಿರು ಪಟಾಕಿಗಳಲ್ಲೂ ರಸಾಯನಿಕ ಅಂಶ ಇದ್ದು, ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಹಾಗಾಗಿ, ಬೆಳಕಿನ ಹಬ್ಬ ದೀಪಾವಳಿ ದಿನದಂದು ಪಟಾಕಿ ಸಿಡಿಸುವಾಗ ಮೈಮರೆಯಬೇಡಿ ಎಂದು ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಹೇಳಿದ್ದಾರೆ.

ಹಸಿರು ಪಟಾಕಿಗಳಲ್ಲೂ ರಸಾಯನಿಕ ಮದ್ದು ಇದೆ. ಸಂಪೂರ್ಣವಾಗಿ ಇದು ಹಾನಿ ಉಂಟುಮಾಡುವುದಿಲ್ಲ ಎಂದು ಯಾವುದೇ ಅಧ್ಯಯನ ತಿಳಿಸಿಲ್ಲ. ಈ ಪಟಾಕಿಗಳು ಸಿಡಿಯುವ ರಭಸಕ್ಕೆ ಹಾನಿ ಉಂಟಾಗಲಿದೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಾದ ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿಯಿದ್ದು, ಅಗತ್ಯ ಔಷಧ ಸಾಮಗ್ರಿಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಕೋವಿಡ್ ಕಾರಣ ಗಾಯಾಳುಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಸೋಂಕು ದೃಢಪಟ್ಟರೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌ಗೆ ವರ್ಗಾಯಿಸಿ, ಅಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸ್ವಚ್ಛವಾದ ಕರವಸ್ತ್ರದಿಂದ ಕಣ್ಣನ್ನು ಮುಚ್ಚಿಕೊಳ್ಳ ಬೇಕು. ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ನೀರಿನಿಂದ ತೊಳೆದುಕೊಳ್ಳಬಾರದು. ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೆರಳಿ, ತುರ್ತು ಚಿಕಿತ್ಸೆ ಪಡೆಯಬೇಕು. ಪಟಾಕಿ ಹೊಡೆದ ಬಳಿಕ ಅದರ ಮೇಲೆ ನೀರು ಹಾಕಬೇಕು. ಇದರಿಂದ ಮಾಲಿನ್ಯದ ಪ್ರಮಾಣ ಕಡಿಮೆ ಆಗುವ ಜತೆಗೆ ಅರಿವಿಲ್ಲದೆಯೇ ಸುಟ್ಟ ಪಟಾಕಿಗಳ ಬಿಸಿ ತುಂಡುಗಳನ್ನು ಮೆಟ್ಟುವುದು ತಪ್ಪಲಿದೆ’ ಎಂದು ತಿಳಿಸಿದರು.

ಪಟಾಕಿ ಸಿಡಿಸುವಾಗ ಮುಖವನ್ನು ದೂರವಿಟ್ಟುಕೊಳ್ಳಬೇಕು, ಐದು ವರ್ಷದೊಳಗಿನ ಮಕ್ಕಳಿಗೆ ಪಟಾಕಿ ಸಿಡಿಸಲು ಬಿಡಬಾರದು. ಮನೆ ಮತ್ತು ವಾಹನ ನಿಲುಗಡೆ ಸ್ಥಳದಲ್ಲಿ ಪಟಾಕಿ ಸುಡಬಾರದು. ಸುಟ್ಟಪಟಾಕಿಗಳನ್ನು ಮನಬಂದಂತೆ ಬಿಸಾಡಬಾರದು. ಸಾಧ್ಯವಾದಷ್ಟು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಪಟಾಕಿ ಸಿಡಿಸುವ ವೇಳೆ ಸಣ್ಣಪುಟ್ಟ ಗಾಯಗಳಾದರೂ ನಿರ್ಲಕ್ಷಿಸದೆ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಅವರು ತಿಳಿಸಿದರು.

ಮಿಂಟೋ ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳೂ ತುರ್ತು ಸೇವೆಗೆ ಸಿದ್ದರಾಗಿದ್ದು ಸಹಾಯವಾಣಿ: 9480832430 ಸಂಖ್ಯೆಗೆ ಕರೆ ಮಾಡಲು ಸೂಚಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com