ಶೀಘ್ರದಲ್ಲೇ ಬೆಳಗಾವಿಯಲ್ಲಿ ಮೆಗಾ ಡೈರಿ!

ಶೀಘ್ರದಲ್ಲೇ ಬೆಳಗಾವಿಯಲ್ಲಿ ಮೆಗಾ ಡೈರಿ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಶೀಘ್ರದಲ್ಲೇ ಬೆಳಗಾವಿಯಲ್ಲಿ ಮೆಗಾ ಡೈರಿ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಹಕಾರ ಸಪ್ತಾಹ 2020ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಈಗಾಗಲೇ ಬೆಳಗಾವಿಯಲ್ಲಿ ಮೆಗಾ ಡೈರಿ ಪಾರ್ಕ್ ಬೇಕು ಎಂದು ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ  ಜಾರಕಿಹೊಳಿಯವರು ಬೇಡಿಕೆ ಸಲ್ಲಿಸಿದ್ದಾರೆ. ಇಲ್ಲಿ 100 ಎಕರೆ ಪ್ರದೇಶದಲ್ಲಿ ಮೆಗಾ ಡೈರಿಯಾದರೆ ಹತ್ತಾರು ಸಾವಿರ ಜನರಿಗೆ ಉದ್ಯೋಗ ಸಿಗುತ್ತದೆ. ಬೇರೆ ಕಡೆ ಹಾಲನ್ನು ಪೌಡರ್ ಮಾಡುವುದರಿಂದ ಆಗುವ ನಷ್ಟವನ್ನು ತಡೆಯಬಹುದಲ್ಲದೆ, ಇಲ್ಲಿಯೇ ಆ ಕೆಲಸವನ್ನು ಮಾಡುವುದರಿಂದ  ಲಾಭವೂ ಆಗುತ್ತದೆ. ಇಲ್ಲಿ 100 ಎಕರೆ ಜಾಗಕ್ಕಾಗಿ ಸಚಿವರಾದ ರಮೇಶ್ ಜಾರಕಿಹೊಳಿ ಅವರೂ ಸಹ ಬೇಡಿಕೆ ಇಟ್ಟಿದ್ದು, ಶೀಘ್ರದಲ್ಲಿ ಆ ಕೆಲಸವನ್ನು ಮಾಡಲು ಚಾಲನೆಯನ್ನು ಮಾಡುತ್ತೇವೆ. ಸರ್ಕಾರದಲ್ಲಿರುವ 30 ಎಕರೆ ಜಮೀನನ್ನು ಶೀಘ್ರವೇ ಕೆಎಂಎಫ್ ಗೆ ನೀಡುತ್ತೇವೆ ಎಂದು ಅವರು  ಹೇಳಿದರು. 

ಕೆಎಂಎಫ್ ನಿಂದ ಪ್ರತಿ ದಿನ 90 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು 1 ಕೋಟಿ ಲೀಟರ್ ಗೆ ಹೆಚ್ಚಿಸಲಾಗುವುದು. ಅಲ್ಲದೆ,ಪ್ರತಿ ಲೀಟರ್ ಹಾಲಿಗೆ 5 ರೂಪಾಯಿಯಂತೆ ರೈತರಿಗೆ ಪ್ರೋತ್ಸಾಹ ಧನದಂತೆ ಮುಖ್ಯಮಂತ್ರಿಗಳು ನೀಡುತ್ತಿದ್ದಾರೆ.  ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕೆಎಂಫ್ ನಲ್ಲಿ ಅನೇಕ ಬದಲಾವಣೆ ತಂದಿದ್ದು,ಅವರು ಅಧಿಕಾರವಹಿಸಿ  ಕೊಂಡಾಗ 79 ಹಾಲಿನ ಉತ್ಪನ್ನಗಳನ್ನು ಕೆಎಂಎಫ್ ತಯಾರಿಸುತ್ತಿತ್ತು.  ಈಗ 140ಕ್ಕೂ ಹೆಚ್ಚು ಹಾಲಿನ ಉತ್ಪನ್ನ ಗಳನ್ನು ತಯಾರಿಸುತ್ತಿದೆ. ಇದು ಅವರ ಬದ್ಧತೆ ತೋರಿಸುತ್ತದೆ. ಇನ್ನು ಜೊಲ್ಲೆ ದಂಪತಿ ಸಹ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ 11 ಸಾವಿರ ಆಶಾ  ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯನ್ನು ಇವರು ಸ್ವಂತ ಖರ್ಚಿನಲ್ಲಿ ಕೊಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ಸಚಿವರು ತಿಳಿಸಿದರು.

ಕೆಎಂಎಫ್ ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ರೈತರು ಹಾಲು ಮಾರಾಟ ಮಾಡಲು ಸಾಧ್ಯವಾಗದೆ ಚರಂಡಿಗೆ ಚೆಲ್ಲಿದ ಘಟನೆ ನಡೆದಾಗ ಮುಖ್ಯಮಂತ್ರಿಗಳು ಇದಕ್ಕೆ ಪರಿಹಾರ ಸೂಚಿಸಿದರು. ಯಾವ ರೈತನೂ ಸಹ ಹಾಲನ್ನು ಚರಂಡಿಗೆ ಚೆಲ್ಲುವಂತಾಗಬಾರದು, ನಷ್ಟವಾಗಬಾರದು  ಎಂಬ ಉದ್ದೇಶದಿಂದ ಸುಮಾರು 2 ಕೋಟಿ 11 ಲಕ್ಷ ಲೀಟರ್ ಹಾಲನ್ನು ಕರ್ನಾಟಕ ರಾಜ್ಯಾದ್ಯಂತ ಉಚಿತವಾಗಿ ಹಂಚುವ ಕಾರ್ಯಕ್ರಮವನ್ನು ಕೆಎಂಎಫ್ ಮೂಲಕ ಮಾಡಿದರು. ಸುಮಾರು 79 ಕೋಟಿ ರೂಪಾಯಿ ಅನುದಾನವನ್ನು ಕೆಎಂಎಫ್ ಗೆ ಮುಖ್ಯಮಂತ್ರಿಗಳು ನೀಡಿದರು ಎಂದು  ಸಚಿವರಾದ ಸೋಮಶೇಖರ್ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ, ನಾವೆಲ್ಲರೂ ಹೊಂ ದಿಕೊಂಡು ಜೊತೆಯಾಗಿ ಹೋಗುವುದು ಸಹಕಾರಿ ಕ್ಷೇತ್ರವಾಗಿದೆ. ಹುಟ್ಟಿನಿಂದ ಸಾವಿನವರೆಗೂ ಪ್ರತಿಯೊಂದು ಹೆಜ್ಜೆಯಲ್ಲಿಯೂ  ನಾವು ಹೊಂದಿಕೊಂಡು ಹೋಗಲೇಬೇಕು. ಇದು ಸಹಕಾರಿ ತತ್ವವನ್ನು ಸಾರುತ್ತದೆ. ಈಗ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com