ಮರಾಠ ಸಮುದಾಯವನ್ನು ಪ್ರೀತಿಸೋಣ: ಡಿಸಿಎಂ ಲಕ್ಷ್ಮಣ್ ಸವದಿ

ಎಲ್ಲಾ ಸಮುದಾಯವನ್ನು ಪ್ರೀತಿಸಿದಂತೆ ಮರಾಠ ಸಮುದಾಯವನ್ನು ಪ್ರೀತಿಸೋಣ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.
ಲಕ್ಷ್ಮಣ್ ಸವದಿ
ಲಕ್ಷ್ಮಣ್ ಸವದಿ

ಕಲಬುರಗಿ: ಎಲ್ಲಾ ಸಮುದಾಯವನ್ನು ಪ್ರೀತಿಸಿದಂತೆ ಮರಾಠ ಸಮುದಾಯವನ್ನು ಪ್ರೀತಿಸೋಣ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಗಡಿ ವಿವಾದ ಮುಗಿದ ಅಧ್ಯಾಯವಾಗಿದ್ದು ಸೂರ್ಯಚಂದ್ರ ಇರುವವರೆಗೂ ಬೆಳಗಾವಿ ನಮ್ಮದು. ಸರ್ಕಾರ ಮರಾಠಾ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿರುವುದು ಭಾಷೆ ಮಧ್ಯದ ಗೊಂದಲ ಅಲ್ಲ.ಒಂದು ಸಮುದಾಯಕ್ಕೆ ಆರ್ಥಿಕ ಬಲ ತುಂಬುವ ಉದ್ದೇಶದಿಂದ ನಿಗಮ ಮಾಡಲಾಗಿದೆ ಎಂದರು.

ಮರಾಠ ಸಮುದಾಯದವರು ನಮ್ಮ ನೆಲದಲ್ಲಿ ಸಾವಿರಾರು ವರ್ಷಗಳಿಂದ ನೆಲೆಸಿದ್ದಾರೆ. ಆ ಸಮುದಾಯದ ಬಡವರಿಗೆ ಅನುಕೂಲ ಆಗಲು ಈ ತೀರ್ಮಾನ ಕೈಗೊಳ್ಳಲಾಗಿದೆ.ಕನ್ನಡ ಪ್ರಾಧಿಕಾರ, ಮರಾಠಿ ಪ್ರಾಧಿಕಾರ ರೀತಿ ಅಲ್ಲ.‌ ಎಲ್ಲಾ ಸಮುದಾಯವನ್ನು ಪ್ರೀತಿಸಿದಂತೆ ಮರಾಠ ಸಮುದಾಯವನ್ನು ಪ್ರೀತಿಸೋಣ ಎಂದು ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.

ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವರ್ ಉದ್ಧಟತನದ ಮಾತನಾಡಿದ್ದಾರೆ. ಗಡಿ ವಿವಾದ ಮುಗಿದ ಅಧ್ಯಾಯವಾಗಿದ್ದು ಸೂರ್ಯಚಂದ್ರ ಇರುವವರೆಗೂ ಬೆಳಗಾವಿ ನಮ್ಮದು.ಈ ವಿಚಾರದಲ್ಲಿ ಅವರು ಉದ್ಧತಟನದ ಮಾತು ನಿಲ್ಲಿಸಬೇಕು. ಅವರು ಇತಿಹಾಸವನ್ನೊಮ್ಮೆ ತೆಗೆದು ನೋಡಬೇಕು. ಅವರ ಮಾತಿನಿಂದಲೇ ಹಿಂದೆ ಅವರ ಸರ್ಕಾರದಲ್ಲಿ ಏನಾಗಿದೆ ಎನ್ನುವುದರ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮನವರಿಕೆ ಮಾಡಿ ಬಂದಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೊತೆ ಅವರೊಂದಿಗೆ ಸಮಾಲೋಚಿಸಿ ತೀರ್ಮಾನ ಕಳುಹಿಸಿಕೊಡುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ ಎಂದ ಅವರು ನಾಲ್ಕೈದು ದಿನಗಳಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದರು.

ನಿಷ್ಕ್ರಿಯರನ್ನು ಕೈಬಿಡಿ ಎನ್ನುವ ರೇಣುಕಾಚಾರ್ಯರ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಅವರ ಭಾವನೆಗಳನ್ನು ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರಿಗೆ ಹಂಚಿಕೊಳ್ಳಲು ಸ್ವತಂತ್ರರು. ಅದೇ ರೀತಿ ರೇಣುಕಾಚಾರ್ಯರು ತಮ್ಮ ಭಾವನೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದರು‌.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com