ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಹಸುಗೂಸು ಅಪಹರಿಸಿ ಮಾರಾಟ: ಇಬ್ಬರ ಬಂಧನ

ವಾಣಿ ವಿಲಾಸ್ ಆಸ್ಪತ್ರೆಯ ಸಿಬ್ಬಂದಿ ಯಡವಟ್ಟಿನಿಂದ ಮಗು ಅಪಹರಿಸಿ ಮಾರಾಟ ಮಾಡಿದ್ದ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವಾಣಿ ವಿಲಾಸ್ ಆಸ್ಪತ್ರೆ
ವಾಣಿ ವಿಲಾಸ್ ಆಸ್ಪತ್ರೆ

ಬೆಂಗಳೂರು: ವಾಣಿ ವಿಲಾಸ್ ಆಸ್ಪತ್ರೆಯ ಸಿಬ್ಬಂದಿ ಯಡವಟ್ಟಿನಿಂದ ಮಗು ಅಪಹರಿಸಿ ಮಾರಾಟ ಮಾಡಿದ್ದ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನ. 9 ರಂದು ವಾಣಿವಿಲಾಸ್ ಆಸ್ಪತ್ರೆಯಲ್ಲಿ ಅಬ್ದುಲ್ ರಶೀದ್ ದಂಪತಿಗೆ ಮಗು ಜನಿಸಿತ್ತು.  ಮಗುವಿನ ಶ್ವಾಸಕೋಶದಲ್ಲಿ ನೀರು ಶೇಖರಣೆ ಆಗಿದ್ದರಿಂದ ಮಗುವನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. 

 ನ. 11 ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆಯಾಗಿದ್ದರಿಂದ ಮಗುವನ್ನು ತಾಯಿ ಬಳಿ ಕರೆದುಕೊಂಡು ಹೋಗುವಂತೆ ಆಸ್ಪತ್ರೆಯಲ್ಲಿ ಹೇಳಲಾಗಿತ್ತು.ಈ ವೇಳೆ  ಮಹಿಳೆಯೊಬ್ಬಳು ಆಗಮಿಸಿ ತಾನು ಮಗುವಿನ ಅಜ್ಜಿ ಎಂದು ಹೇಳಿ, ಮಗುವನ್ನು ಕದ್ದು  ಪರಾರಿಯಾಗಿದ್ದಳು.

ನಂತರ ಮಗು ಕಾಣಿಸದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾದ ಮಗುವಿನ ಪೋಷಕರು ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಈ ವೇಳೆ ಸಿಬ್ಬಂದಿ ಸಿಸಿಟಿವಿ ಪರಿಶೀಲನೆ‌ ಮಾಡಿದಾಗ ಮಗು ಕಳವು ಆಗಿರುವುದು ಬೆಳಕಿಗೆ ಬಂದಿತ್ತು. ನಂತರ ಆಸ್ಪತ್ರೆ ಸಿಬ್ಬಂದಿ ಹಾಗೂ ಮಗುವಿನ ಪೋಷಕರು ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಮಹಿಳೆ ಸೇರಿ ಇಬ್ಬರೂ ಆರೋಪಿಗಳನ್ನು ಬಂಧಿಸಿ, ಮಗುವನ್ನು ಸುರಕ್ಷಿತವಾಗಿ ಪೋಷಕರ ವಶಕ್ಕೆ ನೀಡಿದ್ದಾರೆ. ಆರೋಪಿ ಮಹಿಳೆ ಕುಮಾರಸ್ವಾಮಿ ಲೇಔಟ್ ನಲ್ಲಿ  ದಂಪತಿಗೆ 80 ಸಾವಿರ ರೂಪಾಯಿಗೆ ಮಗು ಮಾರಾಟ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com