ಹೆಚ್ಚಿದ ಕೋವಿಡ್ ಒತ್ತಡ: ಮನೋವೈದ್ಯಕೀಯ ಸಹಾಯವಾಣಿ ಮೊರೆ ಹೋಗುತ್ತಿರುವ ವೈದ್ಯರು!

ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಗಡಿಯಾರದ ಮುಳ್ಳುಗಳಂತೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಇದೀಗ ಮಾನಸಿಕ ಒತ್ತಡಗಳಿಗೆ ಸಿಲುಕಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಒತ್ತಡ ದೂರಾಗಿಸಿಕೊಳ್ಳುವ ಸಲುವಾಗಿ ಮನೋವೈದ್ಯಕೀಯ ಸಹಾಯವಾಣಿಗಳಿಗೆ ಕರೆ ಮಾಡಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಗಡಿಯಾರದ ಮುಳ್ಳುಗಳಂತೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಇದೀಗ ಮಾನಸಿಕ ಒತ್ತಡಗಳಿಗೆ ಸಿಲುಕಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಒತ್ತಡ ದೂರಾಗಿಸಿಕೊಳ್ಳುವ ಸಲುವಾಗಿ ಮನೋವೈದ್ಯಕೀಯ ಸಹಾಯವಾಣಿಗಳಿಗೆ ಕರೆ ಮಾಡಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ. 

ಕರ್ನಾಟಕದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ವೈದ್ಯರು (ಐಎಂಎ-ಕೆ), ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ, ಕರ್ನಾಟಕ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ಸಹಯೋಗದೊಂದಿಗೆ ಈ ಸಹಾಯವಾಣಿಯನ್ನು ತೆರೆಯಲಾಗಿದ್ದು, ಸಹಾಯವಾಣಿಗೆ ಪ್ರತೀನಿತ್ಯ 10-15 ಮಂದಿ ವೈದ್ಯರು ಕರೆ ಮಾಡಿ ಸಲಹೆ ಹಾಗೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ತೀವ್ರ ಒತ್ತಡದಲ್ಲಿರುವ ವೈದ್ಯರಿಗೆ ಸಹಾಯವಾಗುವ ಸಲುವಾಗಿ ಈ ಸಹಾಯವಾಣಿಯನ್ನು ಕಳೆದ ತಿಂಗಳು ಆರಂಭಿಸಲಾಗಿತ್ತು. 

ಕೇಂದ್ರೀಕೃತ ಸಹಾಯವಾಣಿ ಅಡಿಯಲ್ಲಿ 10 ದೂರವಾಣಿ ಸಂಖ್ಯೆಗಳಿವೆ, ಒತ್ತಡಕ್ಕೊಳಗಾಗಿರುವ ವೈದ್ಯರು ಹಾಗೂ ಅವರ ಕುಟುಂಬಸ್ಥರು ಈ ಸಂಖ್ಯೆಗಳಿಗೆ ಕರೆ ಮಾಡಿ ಸಲಹೆ ಹಾಗೂ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೂ ಈ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಎಂದು ಐಎಂಎ-ಕೆ ಸೈಕಿಯಾಟ್ರಿ ಸೆಲ್‌ನ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ ಅವರು ಹೇಳಿದ್ದಾರೆ. 

ಬಹುತೇಕ ವೈದ್ಯರು ಕರ್ತವ್ಯ ನಿರ್ವಹಣೆ ವೇಲೆ ಎಲ್ಲಿ ತಮಗೂ ಸೋಂಕು ತಗುಲುತ್ತದೆಯೋ ಎಂಬ ಒತ್ತಡದಲ್ಲಿದ್ದಾರೆ. ಅಲ್ಲದೆ, ರೋಗಿಗಳು, ಕುಟುಂಬಸ್ಥರಿಂದ ಎದುರಾಗುತ್ತಿರುವ ದೌರ್ಜನ್ಯ, ಹಲ್ಲೆ, ಕುಟುಂಬಸ್ಥರೊಂದಿಗೆ ಸಮಯ ಕಳೆಯಲಾಗದೇ ಇರುವುದು, ಮುಂಜಾಗ್ರತೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಸೋಂಕಿತರೊಂದಿಗೆ ಎದುರಾಗುವ ಮಾತಿನ ಚಕಮಕಿ, ತಮ್ಮ ಜೊತೆಗಿರುವ ವೈದ್ಯರ ಅಕಾಲಿಕ ಮರಣ ಇವೆಲ್ಲವೂ ವೈದ್ಯರಲ್ಲಿ ಆತಂಕ ಹಾಗೂ ಒತ್ತಡವನ್ನುಂಟು ಮಾಡುತ್ತಿದೆ. ಇವಷ್ಟೇ ಇಲ್ಲದೆ, ಇನ್ನೂ ಕೆಲ ವೈದ್ಯರು ಇತರೆ ಸಮಸ್ಯೆಗಳನ್ನೂ ಹೇಳಿಕೊಂಡಿದ್ದಾರೆಂದು ಡಾ.ಗಣೇಶ್ ಪ್ರಸಾದ್ ಅವರು ಹೇಳಿದ್ದಾರೆ. 

ತಮ್ಮ ಮನೆಯಲ್ಲಿರುವ ಹಿರಿಯ ವಯಸ್ಕರು, ಪೋಷಕರು ಹಾಗೂ ತಮ್ಮ ಮಕ್ಕಳಿಗೆ ತಮ್ಮಿಂದ ಎಲ್ಲಿ ಅಪಾಯ ಸಂಭವಿಸುತ್ತದೆಯೋ ಎಂಬ ಭಯವನ್ನು ಸಾಕಷ್ಟು ವೈದ್ಯರು ವ್ಯಕ್ತಪಡಿಸಿದ್ದಾರೆ. ಸೋಂಕು ತಗುಲಿದ ಕೂಡಲೇ ವೈದ್ಯರು ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಇದರಿಂದ ಆರ್ಥಿಕ ಸಂಕಷ್ಟ, ಸಾಮಾಜಿಕ ಕಳಂಕವನ್ನೂ ಎದುರಿಸಬೇಕಾಗುತ್ತದೆ. ಸಾಕಷ್ಟು ವೈದ್ಯರು ಹೃದಯ ಸಂಬಂಧ ಸಮಸ್ಯೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಿಂದ ಬಳಲುತ್ತಿದ್ದಾರೆ. ಇಂತಹವರಿಗೆ ಆಪ್ತಸಲಹೆಗಳು ಅತ್ಯಗತ್ಯವಿರುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com