ಖ್ಯಾತ ವನ್ಯಜೀವಿ ತಜ್ಞ ಅಜಯ್ ಎ ದೇಸಾಯಿ ನಿಧನ

ಭಾರತೀಯ ವನ್ಯಜೀವಿ ಸಂಸ್ಥೆ ಸದಸ್ಯ ಮತ್ತು ಏಷ್ಯಾ ಆನೆ ಸಲಹೆಗಾರ ಅಜಯ್ ಎ ದೇಸಾಯಿ (62 ವರ್ಷ) ಹೃದಯಾಘಾತದಿಂದ ಶುಕ್ರವಾರ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ವನ್ಯಜೀವಿ ತಜ್ಞ ಅಜಯ್ ಎ ದೇಸಾಯಿ
ವನ್ಯಜೀವಿ ತಜ್ಞ ಅಜಯ್ ಎ ದೇಸಾಯಿ

ಬೆಳಗಾವಿ: ಭಾರತೀಯ ವನ್ಯಜೀವಿ ಸಂಸ್ಥೆ ಸದಸ್ಯ ಮತ್ತು ಏಷ್ಯಾ ಆನೆ ಸಲಹೆಗಾರ ಅಜಯ್ ಎ ದೇಸಾಯಿ (62 ವರ್ಷ) ಹೃದಯಾಘಾತದಿಂದ ಶುಕ್ರವಾರ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

ಮೃತರು ಪತ್ನಿ, ಇಬ್ಬರು ಮಕ್ಕಳು, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು. ಅವರು ಮೂಲತಃ ಬಾಗಲಕೋಟೆ ಜಿಲ್ಲೆ ತಾಲ್ಲೂಕಿನ ಕೊಣ್ಣೂರಿನವರು. ಬೆಳಗಾವಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ‌ಬಸವರಾಜ ಪಾಟೀಲ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮ ದರ್ಶನ  ಪಡೆದು, ಸಮವಸ್ತ್ರ ಗೌರವ ಸಲ್ಲಿಸಿದರು.

ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯುಡಬ್ಲ್ಯುಎಫ್) ಸಲಹೆಗಾರರಾಗಿದ್ದ ದೇಸಾಯಿ ಅವರು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟದ (ಐಯುಸಿಎನ್) ಸದಸ್ಯರೂ ಆಗಿದ್ದರು. ಏಷ್ಯಾ ಆನೆಗಳ ತಜ್ಞರ ಗುಂಪಿನ ಸಹ-ಅಧ್ಯಕ್ಷರೂ ಆಗಿದ್ದ ಅವರು, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ  ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ವನ್ಯಜೀವಿ ಜೀವಶಾಸ್ತ್ರದಲ್ಲಿ ಅಧ್ಯಯನ ಮಾಡಿದ್ದರು. ಡಬ್ಲ್ಯುಡಬ್ಲ್ಯುಎಫ್‌ (ವರ್ಲ್ಡ್‌ವೈಡ್ ಫಂಡ್ ಫಾರ್ ನೇಚರ್‌) ಸದಸ್ಯರಾಗಿದ್ದ ಅವರು, ಆನೆಗಳ ಕುರಿತು ಹಲವು ಕಡೆಗಳಲ್ಲಿ ಉಪನ್ಯಾಸ ನೀಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ವನ್ಯಜೀವಿಗಳ ನಿರ್ವಹಣೆ  ಕ್ಷೇತ್ರದಲ್ಲಿ ನಾಲ್ಕು ದಶಕಗಳ ಅನುಭವ ಅವರದು. 50ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ, ತಾಂತ್ರಿಕ ವರದಿ, ಯೋಜನಾ ವರದಿಗಳನ್ನು ಮಂಡಿಸಿದ್ದರು. ವಿವಿಧೆಡೆ ಆನೆಗಳ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

2005ರಿಂದ 2012ರವರೆಗೆ ಪ್ರಾಜೆಕ್ಟ್‌ ಆನೆ ಚಾಲನಾ ಸಮಿತಿಯ ಸದಸ್ಯರಾಗಿದ್ದರು. ಆನೆ ಯೋಜನೆ ಕಾರ್ಯಪಡೆ ಸದಸ್ಯರಾಗಿ ಶ್ರೀಲಂಕಾ, ಭೂತಾನ್, ನೇಪಾಳ, ಇಂಡೊನೇಷ್ಯಾ, ಕಾಂಬೋಡಿಯಾ, ಲಾವೋಸ್ ಹಾಗೂ ಮಲೇಷ್ಯಾ ಮೊದಲಾದ ಕಡೆಗಳಲ್ಲಿ ಕೆಲಸ ಮಾಡಿದ್ದಾರೆ. ಡಬ್ಲ್ಯುಡಬ್ಲ್ಯುಎಫ್‌, ಸಂಯುಕ್ತ  ರಾಷ್ಟ್ರಗಳು, ಎಫ್‌ಎಒ (ಆಹಾರ ಮತ್ತು ಕೃಷಿ ಸಂಸ್ಥೆ), ಅರಣ್ಯ ಇಲಾಖೆ ಹಾಗೂ ಬಾಂಬೆಯ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಸಲಹೆಗಾರರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com