'ನಿಮ್ಮನ್ನು ಕೇಳಿ ಮದುವೆಯಾಗೋಕೆ ಸಾಧ್ಯವೇ? ಆಡಳಿತ ವೈಫಲ್ಯ ಮುಚ್ಚಲು ಬಿಜೆಪಿ ಜನರ ದಿಕ್ಕು ತಪ್ಪಿಸುತ್ತಿದೆ'

ಯಾರನ್ನು ಮದುವೆ ಆಗಬೇಕು ಎಂದು ಹೇಳಲು ನೀವ್ಯಾರು? ನೀವು ಹೇಳಿದವರನ್ನು ಮದುವೆ ಆಗೋಕೆ ಸಾಧ್ಯವೇ? ಮದುವೆ ಆಗೋದು ಅವರವರ ವೈಯುಕ್ತಿಕ ವಿಚಾರ. ಯಾರು ಯಾರ ಮೇಲೆಯೂ ಬಲವಂತ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಯಾರನ್ನು ಮದುವೆ ಆಗಬೇಕು ಎಂದು ಹೇಳಲು ನೀವ್ಯಾರು? ನೀವು ಹೇಳಿದವರನ್ನು ಮದುವೆ ಆಗೋಕೆ ಸಾಧ್ಯವೇ? ಮದುವೆ ಆಗೋದು ಅವರವರ ವೈಯುಕ್ತಿಕ ವಿಚಾರ. ಯಾರು ಯಾರ ಮೇಲೆಯೂ ಬಲವಂತ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಮದುವೆಗೆ ಜಾತಿ, ಧರ್ಮಗಳ ನಿರ್ಬಂಧ ಯಾವುದೇ ಕಾನೂನಿನಲ್ಲಿ ಇಲ್ಲ ಎಂದು ಕೇಂದ್ರ ಗೃಹ ಸಚಿವರು ಸಂಸತ್ತಿನಲ್ಲಿ ಹೇಳಿದ್ದಾರೆ. ‘ಲವ್‌ ಜಿಹಾದ್‌’ ಎಂದರೆ ಏನು ಎಂಬುದನ್ನು ಯಾವುದೇ ಕಾನೂನಿನಲ್ಲೂ ವ್ಯಾಖ್ಯಾನಿಸಿಲ್ಲ ಎಂದೂ ತಿಳಿಸಿದ್ದಾರೆ. ಈಗ ಆ ಕುರಿತು ಮಾತನಾಡುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒಮ್ಮೆ ಕೇಂದ್ರ ಗೃಹ ಸಚಿವರನ್ನು ಕೇಳಲಿ’ ಎಂದು ತಿಳಿಸಿದ್ದಾರೆ.

ಅಲಹಾಬಾದ್‌ ಹೈಕೋರ್ಟ್‌ ಅಂತರ ಧರ್ಮೀಯ ವಿವಾಹಗಳು ಅಕ್ರಮ ಎಂದು ತೀರ್ಪಿನಲ್ಲಿ ಹೇಳಿಲ್ಲ. ಆ ತೀರ್ಪನ್ನು ಉಲ್ಲೇಖಿಸುವವರು ಒಮ್ಮೆ ಓದಲಿ. ಆರ್‌ಎಸ್‌ಎಸ್‌ ಶಾಖೆಗೆ ಹೋಗಿ ನಾನು ಏನನ್ನೂ ಕಲಿಯಬೇಕಾಗಿಲ್ಲ. ಆ ಸಂಘಟನೆಯ ಬಗ್ಗೆ ತಿಳಿದುಕೊಂಡೇ ನಾನು ವಿರೋಧಿಸುತ್ತಿದ್ದೇನೆ ಎಂದು ಹೇಳಿದರು.

ಗೋಹತ್ಯೆ ವಿಚಾರದಲ್ಲಿ ಬಿಜೆಪಿನಾಯಕರು ದ್ವಂದ್ವ ನಿಲುವು ಹೊಂದಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಗೋಮಾಂಸ ರಫ್ತು ಹೆಚ್ಚಾಗಿದೆ. ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಗೋಹತ್ಯೆ, ಲವ್‌ ಜಿಹಾದ್‌ನಂತಹ ವಿಚಾರಗಳ ಕುರಿತು ಮಾತನಾಡಿ ಜನರ ದಿಕ್ಕು ತಪ್ಪಿಸುತ್ತಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com