ಜಾತಿ ತಾರತಮ್ಯ: ಕ್ಷೌರಿಕ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದು!

ರಾಜ್ಯದಲ್ಲಿ ಜಾತಿ ತಾರತಮ್ಯ ಹೆಚ್ಚಾಗುತ್ತಿದ್ದು, ಈ ಸಮಸ್ಯೆಯನ್ನು ದೂರಾಗಿಸುವ ಸಲುವಾಗಿ ದೃಢಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ಇದೀಗ ರಾಜ್ಯದಲ್ಲಿ ಸರ್ಕಾರಿ ಕ್ಷೌರಿಕ ಅಂಗಡಿಗಳನ್ನು ತೆರೆಯಲು ಮುಂದಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಜಾತಿ ತಾರತಮ್ಯ ಹೆಚ್ಚಾಗುತ್ತಿದ್ದು, ಈ ಸಮಸ್ಯೆಯನ್ನು ದೂರಾಗಿಸುವ ಸಲುವಾಗಿ ದೃಢಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ಇದೀಗ ರಾಜ್ಯದಲ್ಲಿ ಸರ್ಕಾರಿ ಕ್ಷೌರಿಕ ಅಂಗಡಿಗಳನ್ನು ತೆರೆಯಲು ಮುಂದಾಗಿದೆ. 

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಈ ಕ್ಷೌರದಂಗಡಿಗಳು ಆರಂಭವಾಗಲಿದ್ದು, ಸರ್ಕಾರವೇ ಇದರ ನಿರ್ವಹಣೆ ಮಾಡಲಿದೆ. 

ಇತ್ತೀಚೆಗೆ ದಲಿತರು ಹಾಗೂ ಕೆಲವು ನಿರ್ದಿಷ್ಟ ಸಮುದಾಯಕ್ಕೆ ಗ್ರಾಮೀಣ ಭಾಗಗಳಲ್ಲಿ ಕ್ಷೌರ ಮಾಡಲು ಹಿಂದೇಟು ಹಾಕಿದ ನಿದರ್ಶನಗಳು ಮರುಕಳಿಸುತ್ತಲೇ ಇದೆ. ಈ ತಾರತಮ್ಯವನ್ನು ಹೋಗಲಾಡಿಸುವ ಸಲುವಾಗಿ ಸರ್ಕಾರ ಇಲಾಖೆ ವತಿಯಿಂದಲೇ ಅಂಗಡಿಗಳನ್ನು ತೆರೆಯುತ್ತಿದೆ. 

ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ, ಜಾತಿ ತಾರತಮ್ಯ ವಿಚಾರವನ್ನು ಹಾಗೂ ರಾಜ್ಯದಲ್ಲಿ ಬೆಳಕಿಗೆ ಬರುತ್ತಿರುವ ಪ್ರಕರಣಗಳ ಕುರಿತು ಅಧಿಕಾರಿಗಳು ಗಮನಕ್ಕೆ ತಂದಿದ್ದರು. 

ಜಾತಿ ಅಥವಾ ಇನ್ನಾವುದೋ ಕಾರಣಕ್ಕೆ ನಿರ್ದಿಷ್ಟ ಸಮುದಾಯಕ್ಕೆ ಕೆಲವೆಡೆ ಕ್ಷೌರದ ಸೇವೆಗಳನ್ನು ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಅಂಗಡಿಯವರು ಅವರಿಗೆ ಕ್ಷೌರ ಮಾಡಿದರೆ ಮೇಲ್ಜಾತಿಯವರು ಬರುವುದಿಲ್ಲ. ಹೀಗಾಗಿ ಇದನ್ನು ತಡೆಯುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದಲೇ ಅಂಗಡಿಗಳನ್ನು ತೆರೆಯಬೇಕು. ಇಲ್ಲಿ ಹೊರಗುತ್ತಿಗೆ ಇಲ್ಲವೇ ನೇರನೇಮಕಾತಿ ಮಾಡಿಕೊಂಡು ಅವರಿಗೆ ಅಗತ್ಯವಿರುವಷ್ಟು ಇಲಾಖೆ ವತಿಯಿಂದಲೇ ತಿಂಗಳ ವೇತನ ನೀಡಬೇಕೆಂದು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com