ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯುತ್ತಿದ್ದ ಪೇದೆ ಸೇರಿ ಇಬ್ಬರ ಬಂಧನ
ಕೆಎಸ್ ಆರ್ ಪಿ ಪೇದೆ ಹುದ್ದೆ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯುತ್ತಿದ್ದ ಪೇದೆ ಸೇರಿ ಇಬ್ಬರನ್ನು ಪಶ್ಚಿಮ ವಿಭಾಗ ಪೊಲೀಸರು ಬಂಧಿಸಿದ್ದಾರೆ.
Published: 23rd November 2020 05:23 AM | Last Updated: 23rd November 2020 05:23 AM | A+A A-

ಸಾಂಕೇತಿಕ ಚಿತ್ರ
ಬೆಂಗಳೂರು: ಕೆಎಸ್ ಆರ್ ಪಿ ಪೇದೆ ಹುದ್ದೆ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯುತ್ತಿದ್ದ ಪೇದೆ ಸೇರಿ ಇಬ್ಬರನ್ನು ಪಶ್ಚಿಮ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಶೃಂಗೇರಿ ಪೊಲೀಸ್ ಠಾಣೆಯ ಪೇದೆ ನಾಗಪ್ಪ ತುಕ್ಕಣ್ಣನವರ್ ಹಾಗೂ ಮಲ್ಲಿಕಾರ್ಜುನ್ ಬಬಲಣ್ಣನವರ್ ಬಂಧನಕ್ಕೊಳಗಾಗಿದ್ದು, ಆರೋಪಿಗಳ ವಿರುದ್ಧ 2 ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ಕೆಎಸ್ ಆರ್ ಪಿ ಹಾಗೂ ಐಆರ್ ಬಿ ಪೇದೆ ಹುದ್ದೆಗಳಿಗೆ ರವಿವಾರ ಪರೀಕ್ಷೆ ನಡೆಸಲಾಗುತ್ತಿತ್ತು. ಪಶ್ಚಿಮ ವಿಭಾಗದಲ್ಲಿ 8 ಪರೀಕ್ಷಾ ಕೇಂದ್ರಗಳಿದ್ದು, ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಸಂದ್ರದಲ್ಲಿನ ಜೆಎಸ್ಎಸ್ ಕಾಲೇಜಿನಲ್ಲಿ ಹಾಲಪ್ಪ ನಾರಾಯಣ ಹಲ್ಲೂರು ಎಂಬುವವರ ಬದಲಿಗೆ ಶೃಂಗೇರಿ ಠಾಣೆ ಪೇದೆ ನಾಗಪ್ಪ ತುಕ್ಕಣ್ಣನವರ್ ಪರೀಕ್ಷೆ ಬರೆಯುತ್ತಿದ್ದ.
ಅಲ್ಲದೇ ರಾಜಾಜಿನಗರದ ಎಸ್ ಜೆಆರ್ ಸಿ ಮಹಿಳಾ ಕಾಲೇಜಿನಲ್ಲಿ ಹನುಮಂತ ವಗ್ಗಣ್ಣನವರ್ ಎಂಬುವವರ ಬದಲು ಮಲ್ಲಿಕಾರ್ಜುನ್ ಬಬಲಣ್ಣನವರ್ ಪರೀಕ್ಷೆ ಬರೆಯುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಅಕ್ರಮದ ಬಗ್ಗೆ ಪೊಲೀಸ್ ನೇಮಕಾತಿ ವಿಭಾಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.