ಗದಗ: ಮಾಗಡಿ ಕೆರೆಗೆ ವಲಸೆ ಹಕ್ಕಿಗಳ ಆಗಮನ; ಪ್ರವಾಸಿಗರು ಕೋವಿಡ್ ನಿಯಮ ಪಾಲನೆಗೆ ಗ್ರಾಮಸ್ಥರ ಒತ್ತಾಯ

 ರಾಜ್ಯದ ಪ್ರಸಿದ್ಧ ವಲಸೆ ಪಕ್ಷಿಗಳ ತಾಣ ಮಾಗಡಿ ಕೆರೆಗೆ ವಲಸೆ ಹಕ್ಕಿಗಳ ಆಗಮನ ಆರಂಭವಾಗಿದೆ.. ಜಿಲ್ಲಾ ಕೇಂದ್ರದಿಂದ 26 ಕಿ. ಮೀ ದೂರದಲ್ಲಿರುವ ಮಾಗಡಿ ಕೆರೆ, ಪ್ರತಿ ವರ್ಷ ಚಳಿಗಾಲದ ಸಂದರ್ಭದಲ್ಲಿ ಬೇರೆಡೆಯಿಂದ ಸಹಸ್ರಾರು ಹಕ್ಕಿಗಳನ್ನು ಆಕರ್ಷಿಸಲಿದ್ದು, ಹಿಮಾಲಯ ವಲಯದಿಂದ ವಲಸೆ ಬರುವ  ಹಕ್ಕಿಗಳು ಕೆಲ ತಿಂಗಳುಗಳ ಕಾಲ ಇಲ್ಲಿಯೇ ಇರಲಿವೆ.
ಮಾಗಡಿ ಕೆರೆಯಲ್ಲಿ ವಿಹರಿಸುತ್ತಿರುವ ಬಾನಾಡಿಗಳು
ಮಾಗಡಿ ಕೆರೆಯಲ್ಲಿ ವಿಹರಿಸುತ್ತಿರುವ ಬಾನಾಡಿಗಳು

ಗದಗ: ರಾಜ್ಯದ ಪ್ರಸಿದ್ಧ ವಲಸೆ ಪಕ್ಷಿಗಳ ತಾಣ ಮಾಗಡಿ ಕೆರೆಗೆ ವಲಸೆ ಹಕ್ಕಿಗಳ ಆಗಮನ ಆರಂಭವಾಗಿದೆ. ಜಿಲ್ಲಾ ಕೇಂದ್ರದಿಂದ 26 ಕಿ. ಮೀ ದೂರದಲ್ಲಿರುವ ಮಾಗಡಿ ಕೆರೆ, ಪ್ರತಿ ವರ್ಷ ಚಳಿಗಾಲದ ಸಂದರ್ಭದಲ್ಲಿ ಬೇರೆಡೆಯಿಂದ ಸಹಸ್ರಾರು ಹಕ್ಕಿಗಳನ್ನು ಆಕರ್ಷಿಸಲಿದ್ದು, ಹಿಮಾಲಯ ವಲಯದಿಂದ ವಲಸೆ ಬರುವ  ಹಕ್ಕಿಗಳು ಕೆಲ ತಿಂಗಳುಗಳ ಕಾಲ ಇಲ್ಲಿಯೇ ಇರಲಿವೆ. ಇದು ರಾಜ್ಯದ ದೊಡ್ಡ ವಲಸೆ ಪಕ್ಷಿಗಳ ತಾಣವಾಗಿದೆ.

ಮಾಗಡಿ ಕೆರೆಯ ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುವ ಪಕ್ಷಿಗಳ ಹಿಂಡುಗಳನ್ನು ನೋಡಿದಾಗ ಅಲ್ಲೊಂದು ಹೊಸದಾದ ಪಕ್ಷಿಲೋಕವೇ ಕಾಣಿಸುತ್ತದೆ. ಕೆರೆಯ ತುಂಬೆಲ್ಲ ಕಣ್ಣು ಹಾಯಿಸಿದಷ್ಟು ಪಕ್ಷಿಗಳ ಸಂಕುಲ ತುಂಬಿಕೊಂಡು ಪ್ರವಾಸಿಗರು ಹಾಗೂ ಫೋಟೋಗ್ರಾಫರ್ ಗಳನ್ನು ಕೈ ಬೀಸಿ ಕರೆಯುತ್ತದೆ. ಆದ್ದರಿಂದ ಕೋವಿಡ್-19 ಸಾಂಕ್ರಾಮಿಕ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.ಪಕ್ಷಿಗಳ ವೀಕ್ಷಣೆಗಾಗಿ ಬರುವವರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕೆಂದು ಗ್ರಾಮಸ್ಥರು ತಿಳಿಸಲು ಯೋಜಿಸಿದ್ದಾರೆ.

ಗದಗ- ಲಕ್ಷ್ಮೇಶ್ವರ ರಸ್ತೆಯಲ್ಲಿ 134 ಎಕರೆ ವಿಸ್ತೀರ್ಣದಲ್ಲಿರುವ ಮಾಗಡಿ ಕೆರೆಯನ್ನು ಮಾಗಡಿ ಪಕ್ಷಿದಾಮ ಎಂದು ಘೋಷಿಸಲಾಗಿದೆ. ಮೊದಲಿಗೆ ಬರಡು ಭೂಮಿಯಂತಿದ್ದ ಈ ಕೆರೆ ಕಳೆದ ಮೂರು ವರ್ಷಗಳಿಂದ ಆಗುತ್ತಿರುವ ಉತ್ತಮ ಮಳೆಯಿಂದಾಗಿ ಇದೀಗ ನೀರಿನಿಂದ ಕಂಗೊಳಿಸುತ್ತಿದೆ.

ಪಕ್ಷಿ ವೀಕ್ಷಕರಿಗೆ ಬೈನಾಕ್ಯೂಲರ್ ಗಳು ಮತ್ತು ಮೊನೊಕ್ಯೂಲರ್ ಸಾಧನಗಳನ್ನು ಅರಣ್ಯ ಇಲಾಖೆ ಪೂರೈಸುತ್ತದೆ. ಪಕ್ಷಿಗಳ ಬಗ್ಗೆ ವಿವರ ನೀಡಲು ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಪಾದಚಾರಿ ಮಾರ್ಗಗಳನ್ನು ವಿಸ್ತರಿಸಲಾಗಿದೆ. ಪಕ್ಷಿ ವೀಕ್ಷಣೆಗೆ ಆಗಮಿಸುವವರು ಲಕ್ಷ್ಮೇಶ್ವರ ಮತ್ತು ಗದಗ ಬಸ್ ನಿಲ್ದಾಣದಿಂದ ಮಾಗಡಿ ಕೆರೆಗೆ ತೆರಳಬಹುದಾಗಿದೆ. 

ಕೋವಿಡ್-19 ಹಿನ್ನೆಲೆಯಲ್ಲಿ ಸಾಕಾಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರು ಕೂಡಾ ನಮ್ಮೊಂದಿಗೆ ಸಹಕಾರ ನೀಡುತ್ತಿದ್ದಾರೆ. ಕೆರೆ ಆವರಣದೊಳಗೆ ಕೋವಿಡ್ ನಿಯಮ ಪಾಲಿಸುವಂತೆ ವೀಕ್ಷಕರಿಗೆ ಹೇಳಲಾಗುವುದು ಎಂದು ಗದಗ ವಿಭಾಗದ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com