ಮೊಬೈಲ್ ನಲ್ಲಿ ಮಾತನಾಡುತ್ತಾ ಯೋಧ ಬೈಕ್ ಚಾಲನೆ: ಪತ್ನಿ ಸಾವು
ಹಂಪ್‌ನಲ್ಲಿ ಬೈಕ್ ಹಾರಿದ್ದರಿಂದ ಹಿಂಬದಿ ಕುಳಿತ್ತಿದ್ದ ಯೋಧನ ಪತ್ನಿ ಕೆಳಕ್ಕೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ಸಂಭವಿಸಿದೆ.
Published: 23rd November 2020 12:01 PM | Last Updated: 23rd November 2020 12:52 PM | A+A A-

ಸಾಂದರ್ಭಿಕ ಚಿತ್ರ
ಬಾಗಲಕೋಟೆ: ಹಂಪ್‌ನಲ್ಲಿ ಬೈಕ್ ಹಾರಿದ್ದರಿಂದ ಹಿಂಬದಿ ಕುಳಿತ್ತಿದ್ದ ಯೋಧನ ಪತ್ನಿ ಕೆಳಕ್ಕೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ಸಂಭವಿಸಿದೆ
ಯೋಧ ಶೇಖರಯ್ಯ ಅವರ ಪತ್ನಿ ಪುಷ್ಪಲತಾ(35) ಮೃತಪಟ್ಟಿದ್ದು, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮಗನ ವಿಡಿಯೋ ಕಾಲ್ ಬಂದಿದ್ದು, ಶೇಖರಯ್ಯ ಅವರು ತಮ್ಮ ಮಗನೊಂದಿಗೆ ಮಾತನಾಡುತ್ತಲೇ ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಮುಂದಿದ್ದ ಹಂಪ್ ಅನ್ನು ಗಮನಿಸದೇ ಅವರು ಬೈಕ್ ಚಲಾಯಿಸಿದ್ದರಿಂದ ಹಂಪ್‌ನಲ್ಲಿ ಬೈಕ್ ಜಂಪ್ ಆಗಿದ್ದರಿಂದ ಹಿಂಬದಿ ಕುಳಿತಿದ್ದ ಅವರ ಪತ್ನಿ ಪುಷ್ಪಲತಾ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತ ಪತ್ನಿಯನ್ನು ಅಪ್ಪಿಕೊಂಡು ಯೋಧ ಕಣ್ಣೀರು ಹಾಕಿ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಇಂದು ಬೆಳಗ್ಗೆ ಕರ್ತವ್ಯಕ್ಕಾಗಿ ಜಮ್ಮು ಕಾಶ್ಮೀರಕ್ಕೆ ಹೊರಡಬೇಕಿದ್ದ ಯೋಧ ಪತ್ನಿಯನ್ನು ಕಳೆದುಕೊಂಡಿದ್ದಾರೆ. ಪತ್ನಿಯನ್ನು ಹಿರೆಮಳಗಾವಿ ಗ್ರಾಮದಲ್ಲಿರುವ ತವರು ಮನೆಗೆ ಬಿಡಲು ಹೋಗುವಾಗ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುಷ್ಪಲತಾ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.