ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ನಂತರ ಅವುಗಳ ಪ್ರಗತಿ ಬಗ್ಗೆ ಆಗಾಗ ಪರಿಶೀಲಿಸುತ್ತಿರಿ: ಸಿಎಂ ಯಡಿಯೂರಪ್ಪ

ದತ್ತು ಪಡೆದ ಶಾಲೆಗಳ ಅಭಿವೃದ್ಧಿ, ಅಲ್ಲಿ ಏನೇನು ಚಟುವಟಿಕೆಗಳು ನಡೆಯುತ್ತಿವೆ, ಶಿಕ್ಷಕರು ಮತ್ತು ಮಕ್ಕಳು ಯಾವ ರೀತಿ ಸುಧಾರಣೆ ಹೊಂದುತ್ತಿದ್ದಾರೆ ಎಂದು ಪರಿಶೀಲನೆ ನಡೆಸಲು ಮೂರ್ನಾಲ್ಕು ತಿಂಗಳಿಗೊಮ್ಮೆ ಭೇಟಿ ನೀಡುತ್ತಿರಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ನಡೆದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸಮಾರಂಭ
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ನಡೆದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸಮಾರಂಭ

ಬೆಂಗಳೂರು: ದತ್ತು ಪಡೆದ ಶಾಲೆಗಳ ಅಭಿವೃದ್ಧಿ, ಅಲ್ಲಿ ಏನೇನು ಚಟುವಟಿಕೆಗಳು ನಡೆಯುತ್ತಿವೆ, ಶಿಕ್ಷಕರು ಮತ್ತು ಮಕ್ಕಳು ಯಾವ ರೀತಿ ಸುಧಾರಣೆ ಹೊಂದುತ್ತಿದ್ದಾರೆ ಎಂದು ಪರಿಶೀಲನೆ ನಡೆಸಲು ಮೂರ್ನಾಲ್ಕು ತಿಂಗಳಿಗೊಮ್ಮೆ ಶಾಲೆಗಳನ್ನು ದತ್ತು ಪಡೆದ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಣ ತಜ್ಞರು ಭೇಟಿ ನೀಡುತ್ತಿರಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

ಅವರು ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ನಡೆದ ರಾಜ್ಯದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಥಮ ಬಾರಿಗೆ ಚುನಾಯಿತ ಪ್ರತಿನಿಧಿಗಳು, ಶಾಲೆಗಳನ್ನು ದತ್ತು ಪಡೆಯುವ ಮೂಲಕ ಅದರ ಅಭಿವೃದ್ಧಿಗೆ ಕಂಕಣಬದ್ಧರಾಗಲು ಹೊರಟಿರುವುದು ಪ್ರಶಂಸನೀಯ. ಇವರ ಜೊತೆಗೆ ಅನೇಕ ಶಿಕ್ಷಣ ತಜ್ಞರು, ಸಂಘ ಸಂಸ್ಥೆಗಳು, ಉಪ ಕುಲಪತಿಗಳು, ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಕೂಡ ಕೈಜೋಡಿಸಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋದರೆ ಸರ್ಕಾರಿ ಶಾಲೆಗಳಲ್ಲಿ ಕೂಡ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬಹುದಾಗಿದೆ ಎಂದರು.

ಶಾಲೆಗಳನ್ನು ದತ್ತು ಪಡೆದುಕೊಂಡು ಅಲ್ಲಿಗೇ ಬಿಟ್ಟುಬಿಡಬೇಡಿ. ದತ್ತು ಪಡೆದುಕೊಂಡ ನಂತರ ಮೂರ್ನಾಲ್ಕು ತಿಂಗಳಿಗೊಮ್ಮೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಯಾವ ರೀತಿ ಶಿಕ್ಷಣ, ಸೌಲಭ್ಯ ಸಿಗುತ್ತಿದೆ, ಏನೇನು ಆಗಬೇಕಿದೆ, ಶಿಕ್ಷಕರು ಏನು ಮಾಡುತ್ತಿದ್ದಾರೆ ಎಂದು ಗಮನಿಸುತ್ತಿರಿ. ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ತಂದೆತಾಯಂದಿರನ್ನು ಕರೆಸಿ ಮಾತನಾಡಿ, ಇದರಿಂದ ಶಾಲೆ, ಮಕ್ಕಳು, ಊರು ಅಭಿವೃದ್ಧಿಯಾಗುತ್ತದೆ ಎಂದರು.

ಶಾಲೆಗಳು ಮತ್ತು ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಕಲಿಕೆಯಲ್ಲಿ ಅಭಿವೃದ್ಧಿ ಹೊಂದಿದರೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಮ್ಮ ವೈಯಕ್ತಿಕ ಸಾಮರ್ಥ್ಯದಿಂದ ಸಬಲರಾಗುತ್ತಾರೆ. ಕುಟುಂಬ ಏಳಿಗೆಯಾಗುತ್ತದೆ ಜೊತೆಗೆ ಉತ್ತಮ ಸಮಾಜ ಕೂಡ ನಿರ್ಮಾಣವಾಗುತ್ತದೆ ಎಂದರು. 

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡ ಸಚಿವರು, ಶಾಸಕರು, ಹಿರಿಯರು, ಉಪ ಕುಲಪತಿಗಳು, ಶಿಕ್ಷಣ ತಜ್ಞರು, ಧಾರ್ಮಿಕ ಕೇಂದ್ರಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ದತ್ತು ಸ್ವೀಕಾರ ಪತ್ರಗಳನ್ನು ವಿತರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com