ಮೇಲ್ವರ್ಗದ ಯುವತಿ ಜೊತೆಗೆ ಪುತ್ರನ ಮದುವೆ: ಪೊಲೀಸರಿಂದ ದಲಿತ ದಂಪತಿಗೆ ಥಳಿತ!

ಮೇಲ್ವರ್ಗದ ಯುವತಿ ಜೊತೆಗೆ ಮಗ ಮದುವೆಯಾಗಿದ್ದಕ್ಕೆ ದಲಿತ ದಂಪತಿ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲಬುರಗಿ: ಮೇಲ್ವರ್ಗದ ಯುವತಿ ಜೊತೆಗೆ ಮಗ ಮದುವೆಯಾಗಿದ್ದಕ್ಕೆ ದಲಿತ ದಂಪತಿ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. 

ಶನಿವಾರ ರಾತ್ರಿ ಇಡೀ ಠಾಣೆಯಲ್ಲೇ ಇರಿಸಿಕೊಂಡು ಹಲ್ಲೆ ನಡೆಸಲಾಗಿದ್ದು,ಗಾಯಗಳಿಂದಾಗಿ ದಲಿತ ದಂಪತಿ ತುಕಾರಾಂ ಮತ್ತು ಸುಜಾತ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಬಳಿಕ ಭಾನುವಾರ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಮೇಲ್ವರ್ಗದ ಯುವತಿ ಜೊತೆಗೆ ತಮ್ಮ ಮಗ ಅಯ್ಯಪ್ಪ ವಿವಾಹ ಆಗಿರುವುದಕ್ಕೆ ತಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಶನಿವಾರ ರಾತ್ರಿಯಲ್ಲೆ ಚಿತ್ರ ಹಿಂಸೆ ನೀಡಿದ್ದಾರೆ.  ಅಯ್ಯಪ್ಪ ಹಾಗೂ ಆ ಯುವತಿ ಮನೆ ಬಿಟ್ಟು ಹೋಗಿ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಮತ್ತೆ ಮನೆಗೆ ವಾಪಾಸ್ ಬಂದಿಲ್ಲ ಎಂದು ಹಲ್ಲೆಗೊಳಗಾದ ದಂಪತಿ ಹೇಳಿದ್ದಾರೆ.

ನವೆಂಬರ್ 18 ರಂದು ಯುವತಿ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದರಿಂದಾಗಿ ತುಕಾರಾಂ ಮತ್ತು ಸುಜಾತ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ತನ್ನ ಮಗ ಅಯ್ಯಪ್ಪನನ್ನು ರಕ್ಷಿಸುವಂತೆ ತುಕಾರಾಂ ಪೊಲೀಸ್ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ಈ ಮಧ್ಯೆ ಕೆಲ ದಲಿತ ಸಂಘಟನೆಗಳ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದು, ದಂಪತಿ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಆದರೆ, ಈವರೆಗೂ ದೂರು ದಾಖಲಾಗಿಲ್ಲ. ದೂರು ದಾಖಲಾದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಕಲಬುರಗಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com