ಕೋವಿಡ್-19: ಅನುಭವ, ಸುಧಾರಿತ ಮೂಲಸೌಕರ್ಯದ ಮೂಲಕ ಎರಡನೇ ಅಲೆಗೆ ಮೈಸೂರು ಸಿದ್ಧತೆ

ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಅತೀ ಹೆಚ್ಚು ತುತ್ತಾಗಿರುವ ಜಿಲ್ಲೆಗಳಲ್ಲಿ ಒಂದಾಗಿದ್ದ ಮೈಸೂರು ಕ್ರಮೇಣ ಕೊರೋನಾ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅದೇ ಅನುಭವ ಮತ್ತು ಸುಧಾರಿತ ಮೂಲಸೌಕರ್ಯಗಳೊಂದಿಗೆ ಸೋಂಕಿನ 2ನೇ ಅಲೆ ವಿರುದ್ಧ  ಹೋರಾಡಲು ಸಿದ್ಧತೆ ನಡೆಸಿದೆ.
ಕೋವಿಡ್ -19: ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸೋಂಕು ಮಾದರಿ ಪರೀಕ್ಷೆ ಪ್ರಯೋಗಾಲಯ
ಕೋವಿಡ್ -19: ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸೋಂಕು ಮಾದರಿ ಪರೀಕ್ಷೆ ಪ್ರಯೋಗಾಲಯ

ಮೈಸೂರು: ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಅತೀ ಹೆಚ್ಚು ತುತ್ತಾಗಿರುವ ಜಿಲ್ಲೆಗಳಲ್ಲಿ ಒಂದಾಗಿದ್ದ ಮೈಸೂರು ಕ್ರಮೇಣ ಕೊರೋನಾ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅದೇ ಅನುಭವ ಮತ್ತು ಸುಧಾರಿತ ಮೂಲಸೌಕರ್ಯಗಳೊಂದಿಗೆ ಸೋಂಕಿನ 2ನೇ ಅಲೆ ವಿರುದ್ಧ  ಹೋರಾಡಲು ಸಿದ್ಧತೆ ನಡೆಸಿದೆ.

ಈಗಾಗಲೇ ದೇಶದ ನಾನಾ ರಾಜ್ಯಗಳಲ್ಲಿ ಕೊರೋನಾ ವೈರಸ್ ನ 2ನೇ ಅಲೆ ಬಾರಿ ಅವಾಂತರ ಸೃಷ್ಟಿ ಮಾಡಿದ್ದು, ದೆಹಲಿ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ  ದಿನನಿತ್ಯ ಹೊಸ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಕರ್ನಾಟಕದ ಮೇಲೂ ಕೊರೋನಾ 2ನೇ ಅಲೆಯ  ಕರಿಛಾಯೆ ಮೂಡಿದ್ದು, ರಾಜಧಾನಿ ಬೆಂಗಳೂರಿನ ಬಳಿಕ ಅತೀ ಹೆಚ್ಚು ಸೋಂಕು ದಾಖಲಾಗಿರುವ ಜಿಲ್ಲೆ ಎಂದರೆ ಅದು ಮೈಸೂರು. ಈಗಾಗಲೇ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 50 ಸಾವಿರ ದಾಟಿದೆ. ಬೆಂಗಳೂರು ಬಳಿಕ 50 ಸಾವಿರ ಸೋಂಕು ಹೊಂದಿದೆ 2ನೇ ಜಿಲ್ಲೆ ಎಂಬ ಕುಖ್ಯಾತಿ  ಕೂಡ ಮೈಸೂರು ಪಡೆದಿದೆ. ಅಂತೆಯೇ ಆಶಾದಾಯಕ ಅಂಶವೆಂದರೆ ಕಳೆದ 45 ದಿನಗಳಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಜಿಲ್ಲೆಯ ಸಕ್ರಿಯ ಪ್ರಕರಣಗಳ ಪೈಕಿ ಶೇ.90ರಷ್ಟು ಕುಸಿತವಾಗಿದೆ. 

ಆಕ್ಟೋಬರ್ 17 ಅಂದರೆ ದಸರಾ ಉದ್ಘಾಟನೆ ದಿನದಂದು ಜಿಲ್ಲೆಯಲ್ಲಿ 7,246 ಸಕ್ರಿಯ ಪ್ರಕರಣಗಳಿದ್ದವು. ಆದರೆ ನವೆಂಬರ್ 22ರ ಹೊತ್ತಿಗೆ ಈ ಸಂಖ್ಯೆ ಕೇವಲ 683ಕ್ಕೆ ಕುಸಿದಿದೆ. 

ಇದೀಗ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ 2ನೇ ಅಲೆಯ ಭೀತಿ ಆರಂಭವಾಗಿದ್ದು, ಮೈಸೂರು ಇದೀಗ 2ನೇ ಅಲೆ ಎದುರಿಸಲು ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ತಜ್ಞರ ವರದಿಯ ಪ್ರಕಾರ ಮೊದಲ ಅಲೆಗಿಂತಲೂ ಕೊರೋನಾ ವೈರಸ್ 2ನೇ ಅಲೆ ಭೀಕರವಾಗಿರಲಿದ್ದು, ಹೆಚ್ಚು  ಸೋಂಕಿತರು ದಾಖಲಾಗುವುದರೊಂದಿಗೇ ಹೆಚ್ಚು ಪ್ರಮಾಣದ ಸಾವಿನ ಸಂಖ್ಯೆ ಕೂಡ ಇರಲಿದೆ. ತಜ್ಞರ ಎಚ್ಚರಿಕೆಯ ನಡುವೆಯೇ ಮುಂದಿನ ಪರಿಸ್ಥಿತಿಗೆ ಸಿದ್ಜರಾಗಿರುವ ಅಧಿಕಾರಿಗಳು, ತಮ್ಮ ಈ ಹಿಂದಿನ ಅನುಭವ ಮತ್ತು ಸುಧಾರಿತ ಮೂಲಭೂತ ಸೌಕರ್ಯಗಳೊಂದಿಗೆ 2ನೇ ಅಲೆಯನ್ನು  ಯಶಸ್ವಿಯಾಗಿ ಎದುರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಹಿರಿಯ ಅಧಿಕಾರಿಯೊಬ್ಬರು, ಜಿಲ್ಲೆಯ ಆರೋಗ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಸುಧಾರಿಸಿರುವುದರಿಂದ ನಾವು ಈಗ ವೈರಸ್ ನ 2ನೇ ಅಲೆಯನ್ನು ಎದುರಿಸಲು ಉತ್ತಮ ಸ್ಥಾನದಲ್ಲಿದ್ದೇವೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣ ಹೆಚ್ಚಿಸಲಾಗಿದೆ. ಪ್ರಸ್ತುತ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯ ಹಾಸಿಗೆಗಳಿವೆ. ನಾವು ಪರಿಶೀಲನಾ ಸಭೆಗಳ ಮೂಲಕ ಪರಿಸ್ಥಿತಿಯನ್ನು  ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಪ್ರತಿದಿನ 4,000 ಕ್ಕೂ ಹೆಚ್ಚು ಪರೀಕ್ಷೆಗಳು ನಡೆಯುತ್ತಿವೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ವೆಂಟಿಲೇಟರ್‌ಗಳನ್ನು ಅಳವಡಿಸಲಾಗಿದೆ. ಒಟ್ಟಾರೆಯಾಗಿ, 2,500 ಹಾಸಿಗೆಗಳು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ  ಲಭ್ಯವಿದೆ. ನಮಗೆ ಹೆಚ್ಚುವರಿ ಸಿಬ್ಬಂದಿಗಳು, ದಾದಿಯರು ಮತ್ತು ವೈದ್ಯರ ಲಭ್ಯತೆ ಇದೆ ಎಂದು ಹೇಳಿದ್ದಾರೆ.

ಇನ್ನು ಈ ಹಿಂದೆ ರಾಜ್ಯದಲ್ಲಿ ಕೋವಿಡ್ ಸೋಂಕಿನ 2ನೇ ಅಲೆ ಡಿಸಂಬರ್ ನಲ್ಲಿ ಆರಂಭವಾಗುವ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದು, ಸಿದ್ದತೆಗಳ ಕುರಿತು ಸಲಹೆ ನೀಡಿದ್ದರು. ಮೊದಲ ಹಂತದ ಅಲೆಯಿಂದಲೇ ಸಾಕಷ್ಟು ಒತ್ತಡಕ್ಕೆ ಸಿಲುಕಿರುವ ವೈದ್ಯಕೀಯ ವಲಯ 2ನೇ ಹಂತದ ಅಲೆಯಲ್ಲಿ  ಮತ್ತಷ್ಟು ಒತ್ತಡಕ್ಕೀಡಾಗುವ ಸಾಧ್ಯತೆ ಇದೆ.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com