ಸಂಸ್ಥೆಗೆ ಅಂಟಿರುವ ಕಳಂಕ ತೊಳೆಯುತ್ತೇನೆ-ಬಿಡಿಎಗೆ ಕಾಯಕಲ್ಪ: ಎಸ್.ಆರ್.ವಿಶ್ವನಾಥ್ ಸಂಕಲ್ಪ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಕಾಯಕಲ್ಪ ನೀಡುವುದಾಗಿ ಬಿಡಿಎ ನೂತನ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಬುಧವಾರ ಹೇಳಿದ್ದಾರೆ.
Published: 26th November 2020 04:11 PM | Last Updated: 26th November 2020 04:11 PM | A+A A-

ಶಾಸಕ ಎಸ್ ಆರ್ ವಿಶ್ವನಾಥ್
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಕಾಯಕಲ್ಪ ನೀಡುವುದಾಗಿ ಬಿಡಿಎ ನೂತನ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಬುಧವಾರ ಹೇಳಿದ್ದಾರೆ.
ಇಂದು ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲವು ಭ್ರಷ್ಟ ಅಧಿಕಾರಿಗಳಿಂದ ಸಂಸ್ಥೆಗೆ ಕಪ್ಪು ಚುಕ್ಕೆ ಬಂದಿದೆ. ಇದನ್ನು ತೊಡೆದು ಹಾಕುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ನೀಡಿದ್ದಾರೆ ಎಂದರು. ಈ ನಿಟ್ಟಿನಲ್ಲಿ ಸಂಸ್ಥೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಜನಸ್ನೇಹಿಯನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಸಾರ್ವಜನಿಕರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗದೇ ಏನಾದರೂ ಸಮಸ್ಯೆಗಳಿದ್ದರೆ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದರು. ಈಗಾಗಲೇ ಹಣ ನೀಡಿರುವ ಸಾರ್ವಜನಿಕರಿಗೆ ಅರ್ಕಾವತಿ ಮತ್ತು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಮಾಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ದಿಸೆಯಲ್ಲಿ ರೈತರ ಮನವೊಲಿಸಿ ಭೂಸ್ವಾಧೀನ ಮಾಡಿಕೊಳ್ಳಲಾಗುವುದು. ನಗರದ ಸಂಚಾರ ದಟ್ಟಣೆ ನಿವಾರಣೆ ಮಾಡುವ ದೃಷ್ಟಿಯಿಂದ ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ ಪೆರಿಫರೆಲ್ ರಿಂಗ್ ರಸ್ತೆ ನಿರ್ಮಾಣ ಮಾಡಲು ಬಿಡಿಎ ಬದ್ಧವಾಗಿದೆ. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಬಿಡಿಎನಲ್ಲಿ ಜನ ವಿರೋಧಿ ಸಿಬ್ಬಂದಿಯನ್ನು ಸಹಿಸುವುದಿಲ್ಲ. ಮುಂದಿನ ಒಂದು ವರ್ಷದೊಳಗೆ ಸಂಸ್ಥೆಯನ್ನು ಆರ್ಥಿಕವಾಗಿ ಸಬಲವನ್ನಾಗಿ ಮಾಡಲಿದ್ದೇವೆ ಎಂದು ಹೇಳಿದರು.