ಆಶ್ರಮದಲ್ಲಿ ವಿವಾಹದ ವೇಳೆ ಆನೆ ಬಳಕೆ: ಪ್ರಾಣಿದಯಾ ಸಂಘಟನೆಗಳ ವಿರೋಧ

ಸಾಕಾನೆಗಳನ್ನು ದೇವಾಲಯಗಳ ಮುಂದೆ ಜನರಿಗೆ ಆಶೀರ್ವಾದ ಕೊಡಿಸಲು, ಜಾತ್ರೆಗಳಲ್ಲಿ ದೇವರ ಮೂರ್ತಿಗಳನ್ನು ಇಟ್ಟು ಮೆರವಣಿಗೆ ಮಾಡಲು ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಕೆ ಮಾಡುವುದು ಸಾಮಾನ್ಯ.
ವಿವಾಹ ಸಮಾರಂಭದಲ್ಲಿ ಆನೆ ಬಳಕೆ ಮಾಡಿರುವುದು
ವಿವಾಹ ಸಮಾರಂಭದಲ್ಲಿ ಆನೆ ಬಳಕೆ ಮಾಡಿರುವುದು

ಬೆಂಗಳೂರು: ಸಾಕಾನೆಗಳನ್ನು ದೇವಾಲಯಗಳ ಮುಂದೆ ಜನರಿಗೆ ಆಶೀರ್ವಾದ ಕೊಡಿಸಲು, ಜಾತ್ರೆಗಳಲ್ಲಿ ದೇವರ ಮೂರ್ತಿಗಳನ್ನು ಇಟ್ಟು ಮೆರವಣಿಗೆ ಮಾಡಲು ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಕೆ ಮಾಡುವುದು ಸಾಮಾನ್ಯ. ಆದರೆ, ನಗರದ ಆಶ್ರಮವೊಂದರಲ್ಲಿ ನಡೆದ ವಿವಾಹ ಸಮಾರಂಭಕ್ಕೂ ಆನೆಯನ್ನು ಬಳಕೆ ಮಾಡಲಾಗಿದ್ದು, ಇದು ಪ್ರಾಣಿದಯಾ ಸಂಘಟನೆಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ. 

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದ ಆವರಣದಲ್ಲಿ ವಿವಾಹ ನಡೆದಿದ್ದು, ಈ ವೇಳೆ ಆನೆಗಳನ್ನು ಬಳಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

ಘಟನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ವಿವಾಹ ಸಮಾರಂಭದಲ್ಲಿ ಆನೆ ಬಳಕೆ ಮಾಡಿರುವುದು ನಿಜಕ್ಕೂ ಆಘಾತವನ್ನು ತಂದಿದೆ. ಇಂತಹದನ್ನು ಎಲ್ಲಿಯೂ ಕೇಳಿರಲಿಲ್ಲ ಎಂದು ಹೇಳಿದ್ದಾರೆ. 

ಮೂರು ತಿಂಗಳ ಹಿಂದೆ ಆಶ್ರಮದಲ್ಲಿ ನೆಲೆಸಿದ್ದ ಮಾವುತನನ್ನು ಆನೆ ಕೊಂದು ಹಾಕಿತ್ತು. ಮದುವೆ ಸಮಾರಂಭದಲ್ಲಿ ಆನೆ ಬಳಕೆ ಸರಿಯಲ್ಲ ಎಂದು ಆನೆಯ ತಜ್ಞರು ತಿಳಿಸಿದ್ದಾರೆ. 

ಆನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಾಕಷ್ಟು ಘಟನೆಗಳಿವೆ. ಆನೆ ಯಾರೂ ಕುಳಿತುಕೊಳ್ಳಬಾರದು ಎಂಬ ಯಾವುದೇ ಹೊಸ ನಿಯಮಗಳಿಲ್ಲ. ಆದರೆ, ಮದುವೆ ಸಮಾರಂಭದಲ್ಲಿ ಬಳಕೆ ಮಾಡಿಕೊಂಡಿರುವುದು ಸರಿಯಲ್ಲ. ಆನೆಗಳಿಗೆ ತಿಳಿಯದ ವ್ಯಕ್ತಿಗಳು ಮುಟ್ಟುವುದು ಇಷ್ಟವಿರುವುದಿಲ್ಲ. ಧಾರ್ಮಿಕ ಉದ್ದೇಶಗಳಿಗೆ ಆನೆಗಳನ್ನು ಬಳಕೆ ಮಾಡಿಕೊಳ್ಳಲು ಪರವಾನಗಿ ಪಡೆಯಲಾಗಿರುತ್ತದೆ. ಇದಕ್ಕೆ ದೇವಾಲಯಗಳ ಧಾರ್ಮಿಕ ಉದ್ದೇಶಗಳಿಗೆ ಬಿಟ್ಟು ಬೇರೆ ಕಾರ್ಯಗಳಿಗೆ ಬಳಕೆ ಮಾಡಿಕೊಂಡಿದ್ದೇ ಆದರೆ, ನಿಯಮ ಉಲ್ಲಂಘಿಸಿದ್ದಾರೆಂದು ಮಾಲೀಕತ್ವವನ್ನು ರದ್ದುಗೊಳಿಸಲಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. 

ಮುಖ್ಯ ವನ್ಯಜೀವಿ ವಾರ್ಡನ್ ಅಜಯ್ ಮಿಶ್ರಾ ಅವರು ಮಾತನಾಡಿ, ಆನೆಗಳನ್ನು ವಿವಾಹ ಸಂದರ್ಭದಲ್ಲಿ ಬಳಕೆ ಮಾಡಿರುವುದನ್ನು ಎಂದಿಗೂ ಕೇಳಿರಲಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 

ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅವರು ಮಾತನಾಡಿ, ಈ ವಿಚಾರ ನನಗೆ ತಿಳಿದಿರಲಿಲ್ಲ. ಇಂತಹ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಯಾವುದೇ ಮನವಿ ಪತ್ರಗಳೂ ನಮಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. 

ವಿವಾಹ ಸಮಾರಂಭಕ್ಕೆ ಆನೆಗಳನ್ನು ಬಳಕೆ ಮಾಡಿರುವುದಕ್ಕೆ ಪ್ರಾಣಿದಯಾ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಇನ್ನು ಘಟನೆ ಬಗ್ಗೆ ಆರ್ಟ್ ಆಫ್ ಲಿವಿಂಗ್ ಆಶ್ರಮದಿಂದ ಯಾರೊಬ್ಬರು ಪ್ರತಿಕ್ರಿಯೆ ನೀಡಲು ಸಂಪರ್ಕಕ್ಕೆ ದೊರೆತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com