ನಿವಾರ್ ಚಂಡಮಾರುತ ದುರ್ಬಲ: ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಕೆ, ಇನ್ನೆರಡು ದಿನ ಮಳೆ ಸಾಧ್ಯತೆ

ಭಾರೀ ಗಾಳಿ ಸಹಿತ ನಿವಾರ್ ಚಂಡಮಾರುತ ರಾಜ್ಯದ ದಕ್ಷಿಣ ಒಳನಾಡಿನ ಸಮೀಪ ಹಾದು ಹೋಗಿದ್ದರಿಂದ ಬೆಂಗಳೂರಿನ ಬಹುತೇಕ ಎಲ್ಲಾ ಕಡೆಗಳಲ್ಲಿ ಸಾಮಾನ್ಯ ಮಳೆ ಬಿದ್ದಿದೆ. ಯಲಹಂಕ ವಲಯದ ಆವಲಹಳ್ಳಿಯಲ್ಲಿ ಅಧಿಕ ಮಳೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭಾರೀ ಗಾಳಿ ಸಹಿತ ನಿವಾರ್ ಚಂಡಮಾರುತ ರಾಜ್ಯದ ದಕ್ಷಿಣ ಒಳನಾಡಿನ ಸಮೀಪ ಹಾದು ಹೋಗಿದ್ದರಿಂದ ಬೆಂಗಳೂರಿನ ಬಹುತೇಕ ಎಲ್ಲಾ ಕಡೆಗಳಲ್ಲಿ ಸಾಮಾನ್ಯ ಮಳೆ ಬಿದ್ದಿದೆ. ಯಲಹಂಕ ವಲಯದ ಆವಲಹಳ್ಳಿಯಲ್ಲಿ ಅಧಿಕ ಮಳೆಯಾಗಿದೆ. 

ಕೆಲವು ದಿನಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ನಿವಾರ್ ಚಂಡಮಾರುತ ಗುರುವಾರ ಬೆಳಗ್ಗೆ ತಮಿಳುನಾಡುಮಾರ್ಗವಾಗಿ ಕಾರೈಕಲ್ ದಾಟಿದ್ದರಿಂದ ರಾಜಧಾನಿಯಲ್ಲಿ ಗುರುವಾರ ಬೆಳಿಗ್ಗೆಯಿಂದ ರಾತ್ರಿ 9ರವರೆಗೆ 30 ಮಿ.ಮೀವರೆಗೂ ಮಳೆಯಾಗಿದೆ. 

ನಿವಾರ್ ರಾಜ್ಯದ ದಕ್ಷಿಣ ಒಳನಾಡು ಸಮೀಪಿಸುತ್ತಿದ್ದಂತೆ ನಗರದಲ್ಲಿ ಬುಧವಾರ ಕಂಡು ಬಂದಿದ್ದ ಚಳಿ ಹಾಗೂ ಮೋಡ ಕವಿದ ವಾತಾವರಣ ಗುರುವಾರಕ್ಕೂ ಮುಂದುವರೆಯಿತು. ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕೆಂಗೇರಿ, ಮೈಸೂರು ರಸ್ತೆ, ವಿಜಯನಗರ, ರಾಜಾಜಿನಗರ, ಮೆಜೆಸ್ಟಿಕ್ ಸುತ್ತಮುತ್ತ, ಕೆ.ಆರ್.ಮಾರುಕಟ್ಟೆ, ಶಾಂತಿನಗರ, ಜಯನಗರ, ಚಾಮರಾಜಪೇಟೆ, ಹೆಬ್ಬಾಳ, ಯಲಹಂಕ, ದೇವನಹಳ್ಳಿ, ಬನಶಂಕರಿ, ರಾಜರಾಜೇಶ್ವರಿ ನಗರ ಸೇರಿದಂತೆ ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಸೋನೆ ಮಳೆ ಸಾಮಾನ್ಯವಾಗಿತ್ತು. ನಂತರ ಸಂಜೆಯಿಂತ ರಾತ್ರಿವರೆಗೂ ಹಗುರದಿಂದ ಸಾಧಾರಣ ಮಳೆ ಸುರಿಯಿತು. 

ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ಸಾಮಾನ್ಯ ಮಳೆಯಾಗಲಿದ್ದು, ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ನ.27ರಂದು ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಬೀಳಬಹುದು. ತಾಪಮಾನ ಗರಿಷ್ಠ 24, ಕನಿಷ್ಟ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಆದರೆ. ನ.28ರಂದು ವರುಣ ತುಸು ಚುರುಕಾಗುವ ಲಕ್ಷಣವಿದ್ದು, ಸಾಮಾನ್ಯದಿಂದ ಹಗುರ ಮಳೆ ಬೀಳಬಹುದು. ಅಂದು ಕ್ರಮವಾಗಿ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com