ಮಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ: ಮೀನಿನ ಬಲೆಗೆ ಸಿಲುಕಿ ಮೀನುಗಾರ ಸಾವು, ಒಬ್ಬಂಟಿಯಾದ ತಾಯಿ
ಮೀನು ಹಿಡಿಯಲು ಹರಡುತ್ತಿದ್ದ ಬಲೆಗೆ ಮೀನುಗಾರನೋರ್ವ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ಬೈಕಂಪಾಡಿ ಬಳಿ ಸಮುದ್ರದಲ್ಲಿ ನಡೆದಿದೆ.
Published: 30th November 2020 06:33 PM | Last Updated: 30th November 2020 06:33 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ಮೀನು ಹಿಡಿಯಲು ಹರಡುತ್ತಿದ್ದ ಬಲೆಗೆ ಮೀನುಗಾರನೋರ್ವ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ಬೈಕಂಪಾಡಿ ಬಳಿ ಸಮುದ್ರದಲ್ಲಿ ನಡೆದಿದೆ.
ಬೈಕಂಪಾಡಿಯ ಹೊಸಹಿತ್ಲು ನಿವಾಸಿ ನವೀನ್ ಕರ್ಕೇರ(32) ಮೃತ ದುರ್ದೈವಿ. ನವೀನ್ ಸಮುದ್ರದಲ್ಲಿ ಸ್ವಲ್ಪ ದೂರ ಸಾಗಿ ಮೀನಿಗೆ ಬಲೆ ಹಾಕುತ್ತಿದ್ದರು. ಈ ವೇಳೆ ಬಲೆಗೆ ಕಾಲು ಬೆರಳು ಸಿಲುಕಿದ್ದು ನವೀನ್ ನೀರಿಗೆ ಬಿದ್ದು ಮುಳುಗಿದ್ದಾರೆ. ನುರಿತ ಈಜುಗಾರರಾಗಿದ್ದರೂ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ನೀರಿನಲ್ಲಿ ಈಜಿ ದಡ ಸೇರಲು ಸಾಧ್ಯವಾಗದೆ ನವೀನ್ ಮೃತಪಟ್ಟಿದ್ದಾರೆ.
ನವೀನ್ ಪೋಷಕರಿಗೆ ನಾಲ್ವರು ಮಕ್ಕಳು. ತಂದೆ ಮೃತರಾಗಿದ್ದು ಅವರ ಮೂವರು ಸಹೋದರರು ಕೂಡ ದುರಂತವೊಂದರಲ್ಲಿ ಸಾವನ್ನಪ್ಪಿದ್ದಾರೆ. ಓರ್ವ ಸಹೋದರ ಮಡಿಕೇರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಇನ್ನೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರನೇಯ ಸಹೋದರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಈಗ ನವೀನ್ ಕೂಡ ಸಾವನ್ನಪ್ಪಿದ್ದರಿಂದ ಅವರ ತಾಯಿ ಒಬ್ಬಂಟಿಯಾಗಿದ್ದಾರೆ.