ಸರ್ಕಾರಿ ಸೇವೆ ವಿಳಂಬಕ್ಕೆ ಪರಿಹಾರ ಪಡೆಯುವುದು ನಾಗರಿಕರ ಹಕ್ಕು: ಸಚಿವ ಸುರೇಶ್ ಕುಮಾರ್

ಸರ್ಕಾರದಿಂದ ದೊರೆಯಬಹುದಾದ ಲಭ್ಯ ಸೇವೆಗಳನ್ನು ಪಡೆಯುವುದು ಮತ್ತು ಸೇವೆಗಳು ವಿಳಂಬವಾದರೆ ಆ ಕುರಿತು ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯುವುದು ಪ್ರತಿಯೊಬ್ಬರ ಹಕ್ಕು ಆಗಿರುವುದರಿಂದ ಸಾರ್ವಜನಿಕರು ಈ ಕುರಿತು ಹೆಚ್ಚು ಜಾಗೃತರಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್ ಅವರು ಕರೆ ನೀಡಿದ್ದಾರೆ.

Published: 30th November 2020 06:06 PM  |   Last Updated: 30th November 2020 06:06 PM   |  A+A-


suresh kumar

ಸುರೇಶ್ ಕುಮಾರ್

Posted By : Lingaraj Badiger
Source : UNI

ಬೆಂಗಳೂರು: ಸರ್ಕಾರದಿಂದ ದೊರೆಯಬಹುದಾದ ಲಭ್ಯ ಸೇವೆಗಳನ್ನು ಪಡೆಯುವುದು ಮತ್ತು ಸೇವೆಗಳು ವಿಳಂಬವಾದರೆ ಆ ಕುರಿತು ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯುವುದು ಪ್ರತಿಯೊಬ್ಬರ ಹಕ್ಕು ಆಗಿರುವುದರಿಂದ ಸಾರ್ವಜನಿಕರು ಈ ಕುರಿತು ಹೆಚ್ಚು ಜಾಗೃತರಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್ ಅವರು ಕರೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನ.30ರಿಂದ ಡಿ. 5ರವರಗೆ ನಡೆಯುವ ಸಕಾಲ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ನಂತರ ಸಕಾಲ ಸೇವೆಗಳಲ್ಲಿ ಸ್ವಲ್ಪ ವ್ಯತ್ಯಯವಾಗಿದ್ದು, ಅದಕ್ಕೆ ಚುರುಕು ನೀಡಿ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಗಳನ್ನು ಪಡೆಯಲು ಅನುವಾಗುವಂತೆ ಸಕಾಲ ಸೇವೆಗಳ ಕುರಿತು ಜಾಗೃತಿ ಮೂಡಿಸಲು ಸಪ್ತಾಹ ಆಚರಿಸಲಾಗುತ್ತಿದೆ ಎಂದರು.

ಲಭ್ಯ ಸೇವೆ ಪಡೆಯುವುದು ಸಾರ್ವಜನಿಕರ ಹಕ್ಕು ಆಗಿರುವಂತೆಯೇ ಸಕಾಲದಲ್ಲಿ ಅದನ್ನು ಒದಗಿಸುವುದು ಯಾವುದೇ ಸರ್ಕಾರದ ಹಾಗೆಯೇ ವ್ಯವಸ್ಥೆಯ ಕರ್ತವ್ಯವಾಗಿರುವುದರಿಂದ ಇದರ ಸಾಕಾರಕ್ಕೆ ಸಕಾಲ ಸೇವೆ ಜಾರಿಗೆ ಬಂದಿದ್ದು, ಅದನ್ನು ಇನ್ನಷ್ಟು ಚುರುಕುಗೊಳಿಸುವುದರೊಂದಿಗೆ ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡುವುದು ಸಪ್ತಾಹದ ಉದ್ದೇಶವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಅಧಿಕಾರಿಗಳು ಯಾವುದೇ ಸೇವೆಯಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು. ವಿಳಂಬದಿಂದ ಸಕಾಲದ ಯೋಜನೆಯ ಉದ್ದೇಶ ಫಲಪ್ರದವಾಗುವುದಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಕಲಚೇತನನೊಬ್ಬ ತನ್ನ ಸಾಮಾಜಿಕ ಭದ್ರತಾ ಯೋಜನೆಯಡಿ ಪಡೆಯಬೇಕಾದ ಪಿಂಚಣಿ ಸ್ಥಗಿತವಾಗಿದ್ದರ ಪುನರ್ ಚಾಲನೆಗೆ ಗ್ರಾಮ ಲೆಕ್ಕಾಧಿಕಾರಿಯೊಬ್ಬರಿಂದ ಆಗುತ್ತಿದ್ದ ವಿಳಂಬ ನೀತಿ ಸಕಾಲ ಯೋಜನೆ ತರಬೇಕೆಂದು ನಿರ್ಧರಿಸಿ, 2012ರ ಏಪ್ರಿಲ್ ನಲ್ಲಿ ಸಕಾಲ ಸೇವೆಯನ್ನು ಆರಂಭಿಸಲಾಯಿತೆಂದು ಸಕಾಲ ಯೋಜನೆ ಜಾರಿಯ ಹಿನ್ನೆಲೆಯನ್ನು ವಿವರಿಸಿದರು. ಪ್ರತಿಯೊಂದು ಸೇವೆಗೂ ದಿನಗಳನ್ನು ನಿಗದಿಪಡಿಸಿ ಸಕಾಲಕ್ಕೆ ಸೇವೆಗಳನ್ನು ನೀಡಲು ಗಡುವು ವಿಧಿಸಲಾಯಿತು ಎಂದು ಸಚಿವರು ತಮ್ಮ ಅನುಭವಗಳನ್ನು ಮೆಲುಕು ಹಾಕಿದರು.

ಅರ್ಜಿ ನಿರಾಕರಿಸುವುದು, ಸಕಾಲ ಯೋಜನೆ ಮೂಲಕ ಅರ್ಜಿ ಸ್ವೀಕರಿಸದೇ ಇರುವುದು, ವಿನಾಕಾರಣ ಅರ್ಜಿ ತಿರಸ್ಕರಿಸುವುದು, ಉದ್ದೇಶಪೂರ್ವಕ ವಿಳಂಬ ಮಾಡುವಂತಹ ಪ್ರಕರಣಗಳು ಕಂಡುಬರುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕುವುದುರೊಂದಿಗೆ ಸಕಾಲವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿ ಮಾಡಲು ಇಲಾಖೆಯ ಪ್ರಧಾನಕಾರ್ಯದರ್ಶಿಯವರು, ಜಿಲ್ಲಾಧಿಕಾರಿಗಳ ನೇತೃತ್ವದ ಸಕಾಲ ಸಮನ್ವಯ ಸಮಿತಿಗಳು ತಂಡಗಳು ಆಗಾಗ್ಗೆ ಸಭೆ ನಡೆಸಿ ಪರಿಶೀಲನೆ ನಡೆಸಬೇಕು ಎಂದು ಸುರೇಶ್ ಕುಮಾರ್ ಹೇಳಿದರು.

ಸಕಾಲ ಸೇವೆ ಯೋಜನೆ ಅರಂಭವಾದಂದಿನಿಂದ ಈ ತನಕ 22,88,81,652 ಅರ್ಜಿಗಳು ಬಂದಿದ್ದು, ಅದರಲ್ಲಿ 22,82,55,686 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಸಕಾಲ ಅರ್ಜಿ ವಿಲೇವಾರಿಯಲ್ಲಿ ಮಂಡ್ಯ ಜಿಲ್ಲೆ ಪ್ರಥಮ, ಚಿಕ್ಕಮಗಳೂರು ದ್ವಿತೀಯ, ಚಿಕ್ಕಬಳ್ಳಾಪುರ ತೃತೀಯ ಸ್ಥಾನ ಪಡೆದರೆ, ರಾಯಚೂರು, ಬೀದರ್ ಮತ್ತು ಬೆಂಗಳೂರು ನಗರ ಕೊನೆಯ ಮೂರು ಸ್ಥಾನದಲ್ಲಿವೆ ಎಂದು ಸಚಿವರು ಹೇಳಿದರು. ನಗರಾಭಿವೃದ್ಧಿ, ಕಂದಾಯ, ಸಾರಿಗೆ, ಅಹಾರ ನಾಗರೀಕ ಸರಬರಾಜು ಇಲಾಖೆಗಳ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಈ ಸಪ್ತಾಹದಲ್ಲಿ ತಮ್ಮ ಹಕ್ಕುಗಳನ್ನು ಚಲಾಯಿಸಬಹುದಾಗಿದೆ ಎಂದರು.

ವಿಶೇಷವಾಗಿ ಪ್ರತಿಯೊಂದು ಇಲಾಖಾ ಕಚೇರಿಯಲ್ಲೂ ಸಕಾಲ ಸೇವೆ ಪಡೆಯುವ ಕುರಿತು ಸಾರ್ವಜನಿಕರ ಗಮನಕ್ಕೆ ಬರುವಂತೆ ಫಲಕ ಹಾಕುವುದು ಕಡ್ಡಾಯವಾಗಿದ್ದು, ಸಕಾಲ ಸೇವೆಗಳು ಇರುವ ಕುರಿತಂತೆ ಇಲಾಖೆಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಹಾಗೆಯೇ ಸೇವೆಯ ವಿಳಂಬದ ಕುರಿತು ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯುವ ಕುರಿತು ಜಾಗೃತಿ ಮೂಡಿಸುವುದು ಇಲಾಖೆಗಳ ಕರ್ತವ್ಯವಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ತ.ಮ. ವಿಜಯಭಾಸ್ಕರ್. ಸಕಾಲ ಸೇವೆಗಳನ್ನು ಪಡೆಯಲು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಸೇರಿದಂತೆ ಸೇವೆ ವಿಳಂಬವಾಗದಂತೆ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಈ ಕುರಿತು ಎಲ್ಲ ಇಲಾಖೆಗಳು ಜನಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

Stay up to date on all the latest ರಾಜ್ಯ news
Poll
Coronil tablets

ಕೋವಿಡ್-19 ವಿರುದ್ಧಪತಂಜಲಿಯ ಕೊರೋನಿಲ್ ಮಾತ್ರೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp