ಬೆಂಗಳೂರು ಮೆಟ್ರೋ ನಿಲ್ದಾಣದಲ್ಲೂ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಟಾಪ್ ಅಪ್ ಮಾಡಬಹುದು, ಆದರೆ...!
'ನಮ್ಮ ಮೆಟ್ರೊ' ನಿಲ್ದಾಣಗಳ ಟಿಕೆಟ್ ಕೌಂಟರ್‌ನಲ್ಲಿಯೇ ಹಳೆಯ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಸುವ ಸೌಲಭ್ಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ಪುನರಾರಂಭಿಸಿದೆ.
Published: 30th November 2020 02:00 PM | Last Updated: 30th November 2020 02:51 PM | A+A A-

ನಮ್ಮ ಮೆಟ್ರೋ ಕಾರ್ಡ್
ಬೆಂಗಳೂರು: 'ನಮ್ಮ ಮೆಟ್ರೊ' ನಿಲ್ದಾಣಗಳ ಟಿಕೆಟ್ ಕೌಂಟರ್‌ನಲ್ಲಿಯೇ ಹಳೆಯ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಸುವ ಸೌಲಭ್ಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ಪುನರಾರಂಭಿಸಿದೆ.
ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಪರಸ್ಪರ ಸಂಪರ್ಕ ಕಡಿಮೆಗೊಳಿಸುವ ಉದ್ದೇಶದಿಂದ ಮೆಟ್ರೋ ನಿಲ್ದಾಣದ ಕೌಂಟರ್‌ಗಳಲ್ಲಿ ಸ್ಮಾರ್ಟ್‌ಕಾರ್ಡ್ ರಿಚಾರ್ಜ್‌ಗೆ ಅವಕಾಶ ನೀಡಿರಲಿಲ್ಲ. ಲಾಕ್‌ಡೌನ್ ನಂತರ ಮೆಟ್ರೊ ರೈಲು ಸೇವೆ ಪುನರಾರಂಭಗೊಂಡಾಗಿನಿಂದಲೂ ಇದೇ ವ್ಯವಸ್ಥೆ ಇತ್ತು. ಟೋಕನ್ ವಿತರಣೆ ಕೂಡ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಸ್ಮಾರ್ಟ್‌ಕಾರ್ಡ್ ರಿಚಾರ್ಜ್ ನಿರ್ಬಂಧಗಳಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿತ್ತು.
ಇದೀಗ ಪ್ರಯಾಣಿಕರ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ಪ್ರಾಧಿಕಾರ ನಿಲ್ದಾಣದಲ್ಲೇ ಮೆಟ್ರೋ ಸ್ಮಾರ್ಟ್ ಕಾರ್ಡ್ ಗಳ ಟಾಪ್ ಅಪ್ ರೀಚಾರ್ಜ್ ಗೆ ಅವಕಾಶ ಕಲ್ಪಿಸಲಾಗಿದೆ. 10 ದಿನಗಳ ಹಿಂದೆಯೇ ನಿಲ್ದಾಣದಲ್ಲಿ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ನಗದು ಸ್ವೀಕರಿಸುವುದಿಲ್ಲ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ, ಪೇಟಿಎಂ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಶುಲ್ಕ ಪಾವತಿಸಿ ರಿಚಾರ್ಜ್ ಮಾಡಿಸಿಕೊಳ್ಳಬಹುದು’ ಎಂದು ನಿಗಮದ ಎಂಡಿ ಅಜಯ್ ಸೇಠ್ ಹೇಳಿದ್ದಾರೆ.
ಅಂತೆಯೇ ಈಗಲೂ ನಿಲ್ದಾಣದಲ್ಲಿ ಒನ್ ಟೈಮ್ ಟ್ರಾವೆಲ್ ಟೋಕನ್ ಗಳನ್ನು ನೀಡಲಾಗುತ್ತಿಲ್ಲ ಎಂದು ಬಿಎಂಆರ್ ಸಿಎಲ್ ಕಾರ್ಯಕಾರಿ ನಿರ್ದೇಶಕ ಎ ಎಸ್ ಶಂಕರ್ ಹೇಳಿದ್ದಾರೆ. ಅಲ್ಲದೆ ಪ್ರಯಾಣಿಕರು ಸಾಧ್ಯವಾದಷ್ಟೂ ಮೊಬೈಲ್ ಆ್ಯಪ್ ಮತ್ತು ಆನ್ ಲೈನ್ ನಲ್ಲೇ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದರಿಂದ ದೈಹಿಕ ಸಂಪರ್ಕ ಕಡಿತವಾಗುತ್ತದೆ. ಪ್ರಯಾಣಿಕರೂ ಕೂಡ ಸೋಂಕಿನಿಂದ ಸುರಿಕ್ಷತರಾಗಿ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ.
ಡಿಜಿಟಲ್ ಪಾವತಿಗೆ ಅವಕಾಶ ನೀಡುವುದರ ಜೊತೆಗೆ ನೇರವಾಗಿ ನಗದು ನೀಡಿ ರಿಚಾರ್ಜ್ ಮಾಡಿಸಲು ಅವಕಾಶ ನೀಡಿದರೆ ಅನುಕೂಲವಾಗುತ್ತದೆ. ಬಹಳಷ್ಟು ಜನ ಒಂದೇ ಬಾರಿಗೆ ಹೆಚ್ಚು ಮೊತ್ತದ ರಿಚಾರ್ಜ್ ಮಾಡಿಸುವುದರಿಂದ ದಟ್ಟಣೆ ಅಷ್ಟಾಗಿ ಹೆಚ್ಚುವುದಿಲ್ಲ ಎಂದು ಪ್ರಯಾಣಿಕ ಡಾ.ಶಶಿಧರ್ ಹೇಳಿದ್ದಾರೆ.