ಅಕ್ಟೋಬರ್ 15ರವರೆಗೆ ಶಾಲೆ, ಕಾಲೇಜುಗಳಿಗೆ ಮಕ್ಕಳು ಬರುವಂತಿಲ್ಲ: ರಾಜ್ಯ ಸರ್ಕಾರ

ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇರುವುದರಿಂದ ಅ.15ರವರೆಗೆ ಶಾಲಾ ಕಾಲೇಜುಗಲನ್ನು ಬಂದ್ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಕೆಲ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯ ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಶಾಲೆ, ಕಾಲೇಜಿಗೆ ಭೇಟಿ ನೀಡಲು ಇದ್ದ ಅನುಮತಿಯನ್ನೂ ರದ್ದುಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇರುವುದರಿಂದ ಅ.15ರವರೆಗೆ ಶಾಲಾ ಕಾಲೇಜುಗಲನ್ನು ಬಂದ್ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಕೆಲ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯ ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಶಾಲೆ, ಕಾಲೇಜಿಗೆ ಭೇಟಿ ನೀಡಲು ಇದ್ದ ಅನುಮತಿಯನ್ನೂ ರದ್ದುಪಡಿಸಿದೆ. 

ಪೋಷಕರ ವಿರೋಧದ ನಡುವೆಯೂ 9ರಿಂದ 12ನೇ ತರಗತಿ ವರೆಗಿನ ಮಕ್ಕಳಿಗೆ ತಮ್ಮ  ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪಠ್ಯ ಸಂಬಂಧಿ ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಸೆ.21ರಿಂದ ಅನುಮತಿ ನೀಡಲಾಗಿತ್ತು. 

ಇದೀಗ ಕೊರೋನಾ ಸೋಂಕು ಹಬ್ಬುವಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಅನುಮತಿಯನ್ನೂ ರದ್ದುಪಡಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಶಿಕ್ಷಣ ಇಲಾಖೆಯ ನೂತನ ಆಯುಕ್ತ ವಿ.ಅನ್ಬು ಕುಮಾರ್, ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಉಳಿದೆಡೆ ಸೆ.21ರಿಂದ ಪ್ರೌಢಶಾಲೆಗಳಿಗೆ ಪಠ್ಯ ಸಂಬಂಧಿ ಸಂದೇಹಗಳ ಪರಿಹಾರಕ್ಕಾಗಿ 9ರಿಂದ 12ನೇ ತರಗತಿವರೆಗಿನ ಮಕ್ಕಳು ತಮ್ಮ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಲು ಈ ಹಿಂದೆ ಅನುಮತಿ ನೀಡಲಾಗಿತ್ತು. ಆದರೆ, ಈ ನಿರ್ಧಾರವನ್ನು ಇಲಾಖೆಯು ಮರುಪರಿಶೀಲಿಸಿದೆ. ಮಕ್ಕಳು ಶಾಲೆಗಳಿಗೆ ಭೇಟಿ ನೀಡುವುದು ಕ್ಷೇಮಕರವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

ಶಾಲಾ- ಕಾಲೇಜು ಆರಂಭಿಸುವ ವಿಚಾರದಲ್ಲಿ ಯಾವುದೇ ಧಾವಂತವಿಲ್ಲ; ಸುರೇಶ್ ಕುಮಾರ್ ಸ್ಪಷ್ಟನೆ
ರಾಜ್ಯದಲ್ಲಿ ಶಾಲಾ- ಕಾಲೇಜುಗಳನ್ನು ಆರಂಭಿಸುವ ವಿಚಾರದಲ್ಲಿ ಯಾವುದೇ ಧಾವಂತವಿಲ್ಲ. ತರಾತುರಿಯಲ್ಲಿ ಶಾಲೆಗಳನ್ನು ಪುನಾರಂಭಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪುನರುಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಕೇಂದ್ರ ಸರ್ಕಾರ ಶಾಲೆಗಳ ಪ್ರಾರಂಭದ ಬಗ್ಗೆ ರಾಜ್ಯಗಳು ‌ನಿರ್ಧಾರ ಕೈಗೊಳ್ಳಲು ಸೂಚಿಸಿದೆ. ನಾವು‌ ಯಾವುದೇ ಆತುರದ ತೀರ್ಮಾನ ಕೈಗೊಳ್ಳುವುದಿಲ್ಲ. ನಾನು ಪ್ರತಿನಿತ್ಯ ಪೋಷಕರು, ಶಿಕ್ಷಣ ತಜ್ಞರ ಜತೆ ಸಮಾಲೋಚನೆ ನಡೆಸುತ್ತಿದ್ದೇನೆ. ಮಕ್ಕಳ ರಕ್ಷಣೆ ನಮ್ಮ ಮೊದಲ ಆದ್ಯತೆ. ಹೀಗಾಗಿ ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ತರಾತುರಿಯಲ್ಲಿ ಶಾಲೆಗಳನ್ನು ಆರಂಭಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅನ್ ಲಾಕ್ 0.5 ಮಾರ್ಗಸೂಚಿಯನ್ನು ನಿನ್ನೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಶಾಲಾ-ಕಾಲೇಜು ಆರಂಭಿಸುವ ಜವಾಬ್ದಾರಿಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆ ಆರಂಭವಾಗಲಿದೆಯೇ ಎಂಬ ಚರ್ಚೆ ನಡೆಯುತ್ತಿರುವುದರಿಂದ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com