ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯಿಂದ ಬಹುಕೋಟಿ ಹಣ ದುರ್ಬಳಕೆ: ಸಾ.ರಾ ಮಹೇಶ್ ಆರೋಪ

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಹುಕೋಟಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.
ಸಾ.ರಾ ಮಹೇಶ್
ಸಾ.ರಾ ಮಹೇಶ್

ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಹುಕೋಟಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ದಾಖಲೆ ಬಿಡುಗಡೆ ಮಾಡಿದ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದಾಗ ಆಂಧ್ರಪ್ರದೇಶದ ತಿರುಮಲದಲ್ಲಿ ವಸತಿ ಗೃಹ, ಕಲ್ಯಾಣ ಮಂಟಪ, ಮೂಲಸೌಕರ್ಯ ಕಲ್ಪಿಸುವುದು ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು. 

ಅದರ ಆಧಾರದ ಮೇಲೆ 2020ರ ಜೂನ್ 30ರಂದು ಸರ್ಕಾರ ಆದೇಶ ಮಾಡಿದೆ. 200 ಕೋಟಿ ರೂ. ಕಾಮಗಾರಿಯ ನಿರ್ಮಾಣ, ನಿರ್ವಹಣೆಯನ್ನು ಟಿಟಿಡಿಗೆ ವಹಿಸಿದೆ. ಆರ್ಕಿಟೆಕ್ಚರ್, ಲ್ಯಾಂಡ್ ಸ್ಕೇಪಿಂಗ್ ಮತ್ತು ಇಂಟೀರಿಯರ್ ವಿನ್ಯಾಸದ ಕೆಲಸವನ್ನು ಮೆ.ಗಾಯತ್ರಿ ಆಂಡ್ ನಮಿತ್ ಆರ್ಕಿಟೆಕ್ಟ್ಸ್ ಅವರಿಗೆ ನೀಡಲಾಗಿದೆ. ಇದಕ್ಕಾಗಿ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ 1999ರಡಿ ವಿನಾಯಿತಿ ಕೂಡ ನೀಡಲಾಗಿದೆ. ಅಂದರೆ 10 ಕೋಟಿ ರೂ. ನೀಡಲಾಗಿದೆ ಎಂದು ದೂರಿದ್ದಾರೆ.

‘ಯೋಜನೆ ನಿರ್ಮಾಣಕ್ಕೆ ತಗಲುವ ವೆಚ್ಚ ಹಾಗೂ ನಿರ್ವಹಣೆಯನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಗೆ ವಹಿಸುವ ಮೂಲಕ ಆಂಧ್ರಪ್ರದೇಶ ಸರ್ಕಾರ ಹಾಗೂ ಅಲ್ಲಿನ ಖಾಸಗಿ ಕಂಪನಿಗಳಿಗೆ ಸಹಾಯ ಮಾಡಿಕೊಟ್ಟಿದ್ದಾರೆ. ವಾಸ್ತುವಿನ್ಯಾಸ, ಲ್ಯಾಂಡ್‌ ಸ್ಕೇಪಿಂಗ್‌ ಮತ್ತು ಒಳಾಂಗಣ ವಿನ್ಯಾಸವನ್ನು ಮೆ. ಗಾಯತ್ರಿ ಆಂಡ್‌ ನಮಿತ್ ಆರ್ಕಿಟೆಕ್ಟ್ಸ್‌ಗೆ (ಜಿಎನ್‌ಎ) ನೀಡಿ, ಅದಕ್ಕೆ ಕೆಟಿಪಿಪಿ ಕಾಯ್ದೆಯ ವಿನಾಯಿತಿ ಕೊಡಿಸಲಾಗಿದೆ. ಕಟ್ಟಡ ನಿರ್ಮಿಸಲು ನಮ್ಮಲ್ಲಿ ಯಾವುದೇ ಇಲಾಖೆಗಳು ಇರಲಿಲ್ಲವೇ? ರಾಜ್ಯಕ್ಕೆ ನಿರ್ವಹಣೆ ಮಾಡಲು ಸಾಧ್ಯವಿಲ್ಲವೇ? ಲೋಕೋಪಯೋಗಿ ಇಲಾಖೆ ಏನು ಮಾಡುತ್ತಿದೆ? ಜಾಗ ನಮ್ಮದು, ಹಣ ನಮ್ಮದು, ನಿರ್ಮಿಸುವವರು ಅವರು. ನಮ್ಮಲ್ಲಿ ವಿನ್ಯಾಸಕಾರರು, ತಾಂತ್ರಿಕ ತಜ್ಞರು ಇರಲಿಲ್ಲವೇ’ ಎಂದು ಪ್ರಶ್ನಿಸಿದರು..

ಅವರು ಸದರಿ ಕಾಮಗಾರಿಯನ್ನು ರಾಜ್ಯದ ಲೋಕೋಪಯೋಗಿ ಇಲಾಖೆಗೆ ವಹಿಸಬಹುದಿತ್ತು. ಆದರೆ ಎಲ್ಲವನ್ನೂ ಟಿಟಿಡಿ ಮೇಲ್ವಿಚಾರಣೆ ಮೂಲಕ ಆಂಧ್ರಪ್ರದೇಶದ ಖಾಸಗಿ ಸಂಸ್ಥೆಗೆ ರೋಹಿಣಿ ಸಿಂಧೂರಿ ಅನುಕೂಲ ಮಾಡಿಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಅದರ ಪ್ರತಿಫಲವಾಗಿ ರೋಹಿಣಿ ಸಿಂಧೂರಿಯವರಿಗೆ ಮೈಸೂರು ಜಿಲ್ಲಾಧಿಕಾರಿ ಸ್ಥಾನ ಗಿಫ್ಟ್ ನಂತೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ರೋಹಿಣಿ ಸಿಂಧೂರಿ ಮಹೇಶ್ ಆರೋಪವನ್ನು ನಿರಾಕರಿಸಿದ್ದು, 4(ಜಿ) ವಿನಾಯಿತಿ ನೀಡಿದ್ದು ನಾನಲ್ಲ, ಅದು ಸರ್ಕಾರದ ನಿರ್ಧಾರ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com