ಆಂಕರ್ ಅನುಶ್ರೀ ಪರ ಪ್ರಭಾವ ಬೀರಿದ ಮಾಜಿ ಸಿಎಂ ಯಾರು ಎಂದು ಬಹಿರಂಗಪಡಿಸಿ: ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಬ್ಬರ ಹೆಸರು, ದಿನಕ್ಕೊಂದು ಸುದ್ದಿಗಳು ಬರುತ್ತಿವೆ. ಸಿಸಿಬಿ ಅಧಿಕಾರಿಗಳಿಂದ ಟಿವಿ ಆಂಕರ್ ಅನುಶ್ರೀಯವರನ್ನು ಕಾಪಾಡಲು ಮಾಜಿ ಸಿಎಂ ಒಬ್ಬರು ಕರೆ ಮಾಡಿದ್ದಾರೆ ಎಂದೆಲ್ಲ ಸುದ್ದಿಗಳು ಬರುತ್ತಿವೆ.

Published: 03rd October 2020 04:09 PM  |   Last Updated: 03rd October 2020 04:41 PM   |  A+A-


H D Kumaraswamy

ಹೆಚ್ ಡಿ ಕುಮಾರಸ್ವಾಮಿ

Posted By : Sumana Upadhyaya
Source : Online Desk

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಹೆಸರು ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಕೇಳಿಬರುತ್ತಿರುವ ಸಂದರ್ಭದಲ್ಲಿ ಅವರ ರಕ್ಷಣೆಗೆ ಪ್ರಭಾವಿ ರಾಜಕಾರಣಿಗಳು ನಿಂತಿದ್ದಾರೆ, ಮಾಜಿ ಸಿಎಂ ಒಬ್ಬರು ಸಿಸಿಬಿ ಅಧಿಕಾರಿಗಳಿಗೆ ಕರೆ ಮಾಡಿ ಪ್ರಕರಣವನ್ನು ಕೈಬಿಡುವಂತೆ, ಅನುಶ್ರೀಯವರನ್ನು ರಕ್ಷಿಸುವಂತೆ ಕೇಳಿಕೊಂಡಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿರುವ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇಂದು ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಬ್ಬರ ಹೆಸರು, ದಿನಕ್ಕೊಂದು ಸುದ್ದಿಗಳು ಬರುತ್ತಿವೆ. ಸಿಸಿಬಿ ಅಧಿಕಾರಿಗಳಿಂದ ಟಿವಿ ಆಂಕರ್ ಅನುಶ್ರೀಯವರನ್ನು ಕಾಪಾಡಲು ಮಾಜಿ ಸಿಎಂ ಒಬ್ಬರು ಕರೆ ಮಾಡಿದ್ದಾರೆ ಎಂದೆಲ್ಲ ಬರುತ್ತಿವೆ. ರಾಜ್ಯದಲ್ಲಿ ನಾನು ಸೇರಿ 6 ಮಂದಿ ಮಾಜಿ ಸಿಎಂಗಳಿದ್ದೇವೆ. ಯಾರು ಆ ಮಾಜಿ ಸಿಎಂ ಅಂತಾ ಹೆಸರು ಬಹಿರಂಗಪಡಿಸಿ, ನಾಡಿನ ಜನತೆಗೆ ಗೊತ್ತಾಗಬೇಕಿದೆ ಎಂದು ಇಂದು ನಗರದಲ್ಲಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಕುಮಾರಸ್ವಾಮಿ ಗರಂ ಆಗಿಯೇ ಹೇಳಿದರು.

ಇಷ್ಟೆಲ್ಲಾ ನಡೆಯುತ್ತಿರುವಾಗ ಸರ್ಕಾರ ಏನು ಮಾಡುತ್ತಿದೆ, ಮಂಗಳೂರಿನ ಸಿಸಿಬಿ ಇನ್ಸ್ ಪೆಕ್ಟರ್ ನ್ನು ಆರಂಭದಲ್ಲಿ ವರ್ಗಾವಣೆ ಮಾಡಿ ನಂತರ ಆದೇಶ ತಡೆಹಿಡಿಯಲಾಯಿತು, ಹಾಗಾದರೆ ಇಲ್ಲಿ ಏನು ನಡೆಯುತ್ತಿದೆ, ಈ ಬಗ್ಗೆ ಗೊತ್ತಾಗಬೇಕು, ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಸರ್ಕಾರ ಹೊರ ತರಬೇಕು. ಮಾಧ್ಯಮಗಳಿಗೂ ಇಲ್ಲಿ ಜವಾಬ್ದಾರಿ ಇದೆ, ಡ್ರಗ್ಸ್ ಪ್ರಕರಣದಲ್ಲಿ ರಾಜಕಾರಣಿಗಳು, ಅವರ ಮಕ್ಕಳು, ಉದ್ಯಮಿಗಳು ಇದ್ದಾರೆ ಎಂದೆಲ್ಲಾ ವರದಿಗಳು ಬರುತ್ತಿವೆ. ಈ ರೀತಿಯ ವರದಿಗಳನ್ನು ಸುಮ್ಮನೆ ಬಿಡಬಾರದು. ನಾನಂತೂ ಇದನ್ನು ತನಿಖೆಗೆ ಒತ್ತಾಯ ಮಾಡುತ್ತೇನೆ, ಹೆಸರುಗಳನ್ನು ಬಹಿರಂಗಪಡಿಸಿ ಎಂದು ಕುಮಾರಸ್ವಾಮಿ  ಹೇಳಿದರು.

ಡ್ರಗ್ಸ್ ಪ್ರಕರಣ ಹಳ್ಳ ಹಿಡಿಯಬಾರದು, ನಾನು ಸಿಎಂಗೆ ಮತ್ತು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯಾಸತ್ಯತೆ ಏನು ಎನ್ನುವುದು ಗೊತ್ತಾಗಬೇಕಿದೆ. ಯಾರು ಮಾಹಿತಿ ಕೊಟ್ಟಿದ್ದಾರೆ? ಯಾರು ಇದ್ದಾರೆ? ಯಾವ ಮಾಜಿ ಸಿಎಂ ಇದ್ದಾರೆ ಅನ್ನೋ ಸತ್ಯ ಹೊರಗೆ ಬರಲಿ ಎಂದು ಬಹಿರಂಗವಾಗಿಯೇ ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp