ಡ್ರಗ್ಸ್ ಪ್ರಕರಣ: ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ವರ್ಗಾವಣೆಗೆ ತಡೆ

ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧ ಸಿಸಿಬಿ ವಿಚಾರಣೆಗೆ ಒಳಪಟ್ಟ ನಿರೂಪಕಿ, ನಟಿ ಅನುಶ್ರೀ ಹಲವು ರಾಜಕೀಯ ನಾಯಕರಿಗೆ ಕರೆ ಮಾಡಿ ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಸಿಬಿ ಪೊಲೀಸ್ ಕಚೇರಿ
ಸಿಸಿಬಿ ಪೊಲೀಸ್ ಕಚೇರಿ

ಮಂಗಳೂರು: ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧ ಸಿಸಿಬಿ ವಿಚಾರಣೆಗೆ ಒಳಪಟ್ಟ ನಿರೂಪಕಿ, ನಟಿ ಅನುಶ್ರೀ ಹಲವು ರಾಜಕೀಯ ನಾಯಕರಿಗೆ ಕರೆ ಮಾಡಿ ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅನುಶ್ರೀ ಮಾಡಿದ ದೂರವಾಣಿ ಕರೆಗಳ ಸಾಕ್ಷ್ಯ ಕೆದಕಿರುವ ಸಿಸಿಬಿಗೆ ಅಚ್ಚರಿಯಾಗಿದೆ. 6 ಸಿಮ್ ಬಳಸುತ್ತಿದ್ದ ಅನುಶ್ರೀ, ಸಿಸಿಬಿ ನೋಟಿಸ್ ಬೆನ್ನಲ್ಲೇ ನಾಲ್ವರು ಪ್ರಭಾವಿಗಳಿಗೆ ಫೋನ್ ಮಾಡಿದ್ದಾರೆ. ಮಾಜಿ ಮುಖ್ಯ ಮಂತ್ರಿ, ಮಾಜಿ ಮುಖ್ಯ ಮಂತ್ರಿಯ ಪುತ್ರ ಹಾಗೂ ಕರಾವಳಿ ಭಾಗದ ಪ್ರಭಾವಿ ರಾಜಕಾರಣಿಗೂ ಕರೆ ಮಾಡಿದ್ದರು. ಮೂರು ಪಕ್ಷಗಳ ಮೂವರು ನಾಯಕರಿಗೆ ಕಾಲ್ ಮಾಡಿದ್ದರು ಎಂದು ದೂರವಾಣಿ ಕರೆ ದಾಖಲೆ ಪರಿಶೀಲನೆ ವೇಳೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಅನುಶ್ರೀ ಅವರನ್ನು ವಿಚಾರಣೆ ನಡೆಸಿದ್ದ ಇನ್ಸ್ ಪೆಕ್ಟರ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದರ ಹಿಂದೆ ಸ್ಥಳೀಯ ಶಾಸಕರೊಬ್ಬರ ಕೈವಾಡವಿದೆ ಎಂದು ತಿಳಿದುಬಂದಿದೆ. ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಪ್ರಕರಣ ಸಂಬಂಧ ಮೊದಲು ಡಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದು ಆತನನ್ನು ಬಿಡುಗಡೆ ಮಾಡುವಂತೆ ಶಾಸಕರು ಒತ್ತಡ ಹಾಕಿದ್ದರು ಎನ್ನಲಾಗಿದೆ. 
ಆದರೆ ಶಾಸಕನ ಒತ್ತಾಯಕ್ಕೆ ಶಿವಪ್ರಕಾಶ್ ಮಣಿದಿರಲಿಲ್ಲ. ಹೀಗಾಗಿ ಶಿವಪ್ರಕಾಶ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈಗ ಸರ್ಕಾರ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯಕ್ ಅವರ ವರ್ಗಾವಣೆ ಆದೇಶವನ್ನು ತಡೆ ಹಿಡಿದಿದೆ. ಈ ಮೂಲಕ ಸಿಸಿಬಿ ಇನ್ಸ್ ಪೆಕ್ಟರ್ ಆಗಿ ಶಿವಪ್ರಕಾಶ್ ನಾಯಕ್ ಅವರೇ ಮುಂದುವರೆಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com