ಬೆಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ; ಗಾಂಜಾ ಅಡ್ಡೆ ಮೇಲೆ ದಾಳಿ; 7 ಮಂದಿ ಬಂಧನ

ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಗಾಂಜಾ ಅಡ್ಡೆಯ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ.
ಗಾಂಜಾ ಮಾರಾಟಗಾರರ ಬಂಧನ
ಗಾಂಜಾ ಮಾರಾಟಗಾರರ ಬಂಧನ

ಮಂಡ್ಯ; ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಗಾಂಜಾ ಅಡ್ಡೆಯ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ.

ಸೋಮನಹಳ್ಳಿ ಗ್ರಾಮದ ಯುವಕ ಸುದೀಪ್ ಸೇರಿದಂತೆ 7 ಮಂದಿಯನ್ನು ಸಿಸಿಬಿ ಪೊಲೀಸರು ಬುಧವಾರ ಸಂಜೆಯೇ ಮಾಲು ಸಹಿತ ಬಂಧಿಸಿ ಕರೆದೊಯ್ದಿದ್ದಾರೆ.

ಹಿನ್ನೆಲೆ
ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯ ಬಳಿ  ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ  ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು,ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದರು. ಇತ್ತ ಎಂದಿನಂತೆಯೇ ಗಾಂಜಾಮಾರಾಟದಲ್ಲಿ ಆರೋಪಿಗಳು ತಲ್ಲೀನರಾಗಿದ್ದರು. ಸ್ಥಳೀಯ ಸಾರ್ವಜನಿಕರಿಂದ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಸೋಮಹಳ್ಳಿಯ ಸುದೀಪ  ಸೇರಿದಂತೆ ಆತನ ಜೊತೆ ಇದ್ದ ಬೆಂಗಳೂರು ಮೂಲದ 6 ಮಂದಿಯನ್ನು ಸಹ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯ ವೇಳೆ ಆರೋಪಿಗಳ ಬಳಿ ಇದ್ದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದುಕೊಂಡು ಸ್ಥಳೀಯ ಪೋಲೀಸರಿಗೂ ಯಾವುದೇ ಮಾಹಿತಿಯನ್ನು ನೀಡದೆ ಆರೋಪಿಗಳನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಹಲವು ದಿನಗಳಿಂದ ಈಭಾಗದಲ್ಲಿ ಗಾಂಜಾ ಮಾರಾಟದಂಧೆ ಇತ್ತು  ಎಂದು ಸ್ಥಳೀಯರೇ ಹೇಳಿಕೆ ನೀಡಿದ್ದು ಸ್ಥಳೀಯ ಪೋಲೀಸರು ಇದನ್ನು ತಡೆಗಟ್ಟಲು ವಿಫಲವಾಗಿದ್ದರು,ಈ ಹಿನ್ನೆಲೆಯಲ್ಲಿ ಸ್ಥಳೀಯರು ಸಿಸಿಬಿ ಗೆ ದೂರು ನೀಡಿದ್ದರು,ಅಂತೆಯೇ ಬೆಂಗಳೂರಿನ ಸಿಸಿಬಿ ಪೊಲೀಸರು ಸೋಮಹಳ್ಳಿ ಬಳಿಯ ಗಾಂಜಾ ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. 

ದಾಳಿ ವಿಚಾರವಾಗಿ ಸ್ಥಳೀಯ ಪೋಲೀಸ್ ಠಾಣೆಗೆ ಯಾವುದೇ ಮಾಹಿತಿಯನ್ನು ಬಿಟ್ಟು ಕೊಡದೆ ಆರೋಪಿಗಳನ್ನು ವಶಕ್ಕೆ ಪಡೆದಿರುವುದು ಸ್ಥಳೀಯ ಪೋಲೀಸರಲ್ಲಿ ಮುಜುಗರ ಉಂಟು ಮಾಡಿದೆ.ತಾಲ್ಲೂಕಿನಾದ್ಯಂತ ಈಗಲೂ ಗಾಂಜಾ ಘಾಟು ಅಕ್ರಮವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು ಇನ್ನಾದರೂ  ಜಿಲ್ಲಾದ್ಯಂತ ಸಂಪೂರ್ಣವಾಗಿ ತೊಡೆದುಹಾಕಿ ಯುವ ಸಮೂಹವನ್ನು ರಕ್ಷಿಸುವ ನಿಟ್ಟಿನಲ್ಲಿ ಪೋಲೀಸರು ಎಚ್ಚೆತ್ತುಕೊಳ್ಳಬೇಕೆಂದು ಸಾರ್ವಜನಿಕರು ಕೂಡ ಆಗ್ರಹಿಸಿದ್ದಾರೆ.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com