ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ಅತೀ ಹೆಚ್ಚು!

ದೇಶಾದ್ಯಂತ ಮಾರಕ ಕೊರೋನಾ ವೈರಸ್ ನ ಅಬ್ಬರ ಜೋರಾಗಿರುವಂತೆಯೇ ಇತ್ತ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ಅತೀ ಹೆಚ್ಚು ಎಂಬ ಮಾಹಿತಿ ಹೊರಬಿದ್ದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶಾದ್ಯಂತ ಮಾರಕ ಕೊರೋನಾ ವೈರಸ್ ನ ಅಬ್ಬರ ಜೋರಾಗಿರುವಂತೆಯೇ ಇತ್ತ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ಅತೀ ಹೆಚ್ಚು ಎಂಬ ಮಾಹಿತಿ ಹೊರಬಿದ್ದಿದೆ.

ಹೌದು.. ಪ್ರಸ್ತುತ ಕರ್ನಾಟಕದಲ್ಲಿ 1.15 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಇವರೆಲ್ಲರೂ ಆಸ್ಪತ್ರೆ ಮತ್ತು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಟೋಬರ್ 1ರಿಂದ ರಾಜ್ಯದಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದ್ದು, ಅಕ್ಟೋಬರ್ 1ರಂದು ರಾಜ್ಯದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ  1,10,412ರಷ್ಟಿತ್ತು. ಇದೇ ಸಂಖ್ಯೆ ಅಕ್ಟೋಬರ್ 2ರಂದು 1,11, 986 ಮತ್ತು ಅಕ್ಟೋಬರ್ 3ರಂದು 1,12,783 ಸಕ್ರಿಯ ಪ್ರಕರಣಗಳಷ್ಟಿತ್ತು. ಇದೀಗ ಇದೇ ಸಂಖ್ಯೆ 1,15,574ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ ಸೆಪ್ಟೆಂಬರ್ 10ರಂದು ಮೊದಲ ಬಾರಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷ ಗಡಿ ದಾಟಿತ್ತು. ಅಂದು 1,01,537ರಷ್ಟು ಸಕ್ರಿಯ ಪ್ರಕರಣಗಳಿತ್ತು. ಬಳಿಕ ಸೆಪ್ಟೆಂಬರ್ 16, 17 ಮತ್ತು 18ರಂದು ಸತತವಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷ ಗಡಿ ದಾಟಿತ್ತು ಎಂದು ಬಿಬಿಎಂಪಿ ವಾರ್ ರೂಮ್  ದತ್ತಾಂಶಗಳಿಂದ ತಿಳಿದುಬಂದಿದೆ. ಬೆಂಗಳೂರು ಮಹಾನಗರವೊಂದರಲ್ಲೇ 86,472 ಮಂದಿ ಸೋಂಕಿತರು ಸಕ್ರಿಯ ಕ್ವಾರಂಟೈನ್ ಆಗಿದ್ದಾರೆ. ಬಳಿಕ ಮೈಸೂರು, ಧಾರವಾಡ, ಹಾಸನ ಮತ್ತು ದಾವಣಗೆರೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಶಂಕಿತ ಸೋಂಕಿತರಿದ್ದಾರೆ ಎಂದು ಹೇಳಲಾಗಿದೆ. 

ನಿನ್ನೆ ಒಂದೇ ದಿನ ರಾಜ್ಯದಲ್ಲಿ 10, 145 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ರಾಜ್ಯದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 6.40 (6,40,661) ಗಡಿ ದಾಟಿತ್ತು. ಅಂತೆಯೇ 67 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 9,286ಕ್ಕೆ  ಏರಿಕೆಯಾಗಿದೆ. 

ರಾಜ್ಯದಲ್ಲಿ ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ನಿನ್ನೆ ಬೆಂಗಳೂರಿನಲ್ಲಿ 4,340 ಪ್ರಕರಣಗಳು ದಾಖಲಾಗಿದೆ. 2ನೇ ಸ್ಥಾನದಲ್ಲಿ ಮೈಸೂರು ಇದ್ದು, ಇಲ್ಲಿ 1,037 ಪ್ರಕರಣ, ಹಾಸನದಲ್ಲಿ 307, ಬಳ್ಳಾರಿಲ್ಲಿ 304, ದಕ್ಷಿಣ ಕನ್ನಡದಲ್ಲಿ 293 ಪ್ರಕರಣಗಳು  ದಾಖಲಾಗಿವೆ. ರಾಜ್ಯದಲ್ಲಿ 847 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಾವಿನ ಪ್ರಮಾಣ 1.44ಕ್ಕೆ ಕುಸಿತವಾಗಿದೆ. ಅಂತೆಯೇ ರಾಜ್ಯದಲ್ಲಿ ಸೋಂಕಿನಿಂದ ಚೇತರಿಕೆ ಪ್ರಮಾಣ ಶೇ.80.50ಕ್ಕೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com