ಡಿ ಕೆ ಬ್ರದರ್ಸ್ ಮೇಲೆ ಸಿಬಿ'ಐ': ದಾಳಿ ವೇಳೆ 50 ಲಕ್ಷ ರೂ. ನಗದು ವಶ, ರಾಜಕೀಯ ಷಡ್ಯಂತ್ರ ಎಂದು ಕಾಂಗ್ರೆಸ್ ಆಕ್ರೋಶ

ಕೇಂದ್ರ ತನಿಖಾ ದಳ(ಸಿಬಿಐ) ಸೋಮವಾರ ಬೆಳ್ಳಂಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಸೋದರ ಸಂಸದ ಡಿ ಕೆ ಸುರೇಶ್ ಅವರಿಗೆ ಸೇರಿದ 14 ಸ್ಥಳಗಳ ಮೇಲೆ ಏಕಾಏಕಿ ದಾಳಿ ನಡೆಸಿ ಶೋಧ ವೇಳೆ ಸುಮಾರು 50 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿಯಲ್ಲಿರುವ ಡಿ ಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು
ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿಯಲ್ಲಿರುವ ಡಿ ಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು

ಬೆಂಗಳೂರು: ಕೇಂದ್ರ ತನಿಖಾ ದಳ(ಸಿಬಿಐ) ಸೋಮವಾರ ಬೆಳ್ಳಂಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಸೋದರ ಸಂಸದ ಡಿ ಕೆ ಸುರೇಶ್ ಅವರಿಗೆ ಸೇರಿದ 14 ಸ್ಥಳಗಳ ಮೇಲೆ ಏಕಾಏಕಿ ದಾಳಿ ನಡೆಸಿ ಶೋಧ ವೇಳೆ ಸುಮಾರು 50 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಡಿಕೆಶಿ ನಿವಾಸದ ಫೋನ್ ಹಾಗೂ ಇಂಟರ್‌ನೆಟ್‌ ಸಂಪರ್ಕ ಕಡಿತಗೊಳಿಸಲಾಗಿದೆ.

ದಾಳಿ ನಡೆದ ಬೆನ್ನಲ್ಲೇ ಡಿಕೆಶಿವಕುಮಾರ್ ಹಾಗೂ ಅವರ ಕುಟುಂಬಸ್ಥರ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಬೇರೆಯವರನ್ನು ಸಂಪರ್ಕ ಮಾಡದಂತೆ ಎಲ್ಲಾ ರೀತಿಯ ಎಚ್ಚರಿಕೆ ಕ್ರಮಗಳನ್ನು ಸಿಬಿಐ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಸಿಬಿಐ ಅಧಿಕಾರಿಗಳು ತಪಾಸಣೆಯನ್ನು ಮುಂದುವರಿಸಿದ್ದು ಸುಮಾರು 50 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡಿಕೆಶಿ ಮನೆ ಅಷ್ಟೇ ಅಲ್ಲದೆ ಕಾರನ್ನು ಕೂಡಾ ಪರಿಶೀಲನೆ ಮಾಡಲಾಗಿದೆ ಎಂಬ ಮಾಹಿತಿ ಇದೆ.

ಸಿಬಿಐ ಅಧಿಕಾರಿಗಳು ರಾಮನಗರ, ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ 14 ಕಡೆಗಳಲ್ಲಿ ದಾಳಿ ನಡೆಸಿದ್ದು ತೀವ್ರವಾದ ತನಿಖೆ ಮುಂದುವರಿಸುತ್ತಿದ್ದಾರೆ. ಈ ಹಿಂದೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಡಿ ಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿ ನಂತರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ವಕ್ತಾರ ಸೂರಜ್ ಅರಸ್, ಮುಂಬರುವ ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ ಬೆಂಗಳೂರಿನ ಸದಾಶಿವನಗರದಲ್ಲಿರುವ ಶಿವಕುಮಾರ್ ಮನೆಯಲ್ಲಿ ಚುನಾವಣೆ ಸಿದ್ಧತೆ ಸಂಬಂಧ ಇಂದು ಸಭೆ ನಡೆಸುವ ತಯಾರಿಯಲ್ಲಿದ್ದರು. ಆ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದರು.

ಏಕಾಏಕಿ 60ಕ್ಕೂ ಹೆಚ್ಚು ಅಧಿಕಾರಿಗಳು 14 ಕಡೆ  ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ ಎಂದು ಹೇಳಿದರು.

ಉಪ ಚುನಾವಣೆ ಹೊಸ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆದಿರುವುದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.

ರಂದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿ, ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಗಳು ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಮೋದಿ ಮತ್ತು ಬಿ ಎಸ್ ಯಡಿಯೂರಪ್ಪನವರು ಸಿಬಿಐ ಅಧಿಕಾರಿಗಳನ್ನು ತಮ್ಮ ಕೈಗೊಂಬೆಗಳಂತೆ ಕುಣಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸುವ ಮೂಲಕ ಅವರ ಉದ್ದೇಶವೆಲ್ಲವೂ ಈಡೇರುತ್ತದೆ ಎಂದು ಅಂದುಕೊಂಡಿದ್ದರೆ ಅದು ಭ್ರಮೆಯಷ್ಟೆ ಎಂದಿದ್ದಾರೆ.

ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರಗಳ ಉಪ ಚುನಾವಣೆ ನವೆಂಬರ್ 3ರಂದು ನಡೆಯಲಿದ್ದು ಈ ಸಂದರ್ಭದಲ್ಲಿಯೇ ಸಿಬಿಐ ದಾಳಿಯಾಗಿರುವುದರಿಂದ ಇದಕ್ಕೆ ರಾಜಕೀಯ ಲೇಪನ ಹಚ್ಚಲಾಗುತ್ತಿದೆ. ಈ ಮಧ್ಯೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸಿಬಿಐ ದಾಳಿಯನ್ನು ಖಂಡಿಸಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ಮನೆ ಮುಂದೆ ಮತ್ತು ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.

ದಾಳಿ ಹಿನ್ನೆಲೆ: ಅಕ್ರಮ ಹಣ ವರ್ಗಾವಣೆ ಕೇಸಿನ ತನಿಖೆಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ನೀಡಿದ್ದ ಮಾಹಿತಿ ಆಧಾರದ ಮೇಲೆ ಸಿಬಿಐ ಭ್ರಷ್ಟಾಚಾರ ಕೇಸನ್ನು 58 ವರ್ಷದ ಶಿವಕುಮಾರ್ ವಿರುದ್ಧ ದಾಖಲಿಸಿತ್ತು. 2017ರಲ್ಲಿ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ 8.6 ಕೋಟಿ ರೂಪಾಯಿ ಅಕ್ರಮ ಸಂಪತ್ತು ಪತ್ತೆಯಾದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಬಂಧಿಸಿತ್ತು.

ಕಳೆದ ವರ್ಷ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ನಾಲ್ಕು ದಿನಗಳ ಕಾಲ ತನಿಖೆ ನಡೆಸಿ ನಂತರ ಬಂಧಿಸಿತ್ತು. ತನಿಖೆ ಸಂಪೂರ್ಣವಾಗಿ ಮಾಡಿದ ನಂತರ ಅಕ್ರಮ ಆಸ್ತಿ 11 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ನಂತರ ಆದಾಯ ತೆರಿಗೆ ಇಲಾಖೆ ದಾಖಲಿಸಿದ್ದ ಆರೋಪಪಟ್ಟಿ ಆಧರಿಸಿ 2018ರಲ್ಲಿ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿತ್ತು.

ಈ ವಿಚಾರಣೆ ವೇಳೆ ಕಳೆದ ವರ್ಷ ಜಾರಿ ನಿರ್ದೇಶನಾಲಯ ಕೆಲವು ಕೇಸುಗಳನ್ನು ಸಿಬಿಐಗೆ ವರ್ಗಾಯಿಸಿತ್ತು. ಆದರೆ ಸಿಬಿಐ ದಾಳಿ ಮಾಡುತ್ತಿರುವುದು, ಶಿವಕುಮಾರ್ ವಿರುದ್ಧ ಕೇಸು ದಾಖಲಿಸಿರುವುದು ಇದೇ ಮೊದಲು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com