ಕಾವಿ ಹಾಕಿಕೊಳ್ಳಲು ಯೋಗಿ ನಾಲಾಯಕ್: ಸಿದ್ದರಾಮಯ್ಯ ಟೀಕಾ ಪ್ರಹಾರ

ಉತ್ತರ ಪ್ರದೇಶ ಅತ್ಯಾಚಾರ ಪ್ರಕರಣ ಖಂಡಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಸಿದ್ದರಾಮಯ್ಯ, ಯೋಗಿ ಆದಿತ್ಯನಾಥ್
ಸಿದ್ದರಾಮಯ್ಯ, ಯೋಗಿ ಆದಿತ್ಯನಾಥ್

ಬೆಂಗಳೂರು: ಉತ್ತರ ಪ್ರದೇಶ ಅತ್ಯಾಚಾರ ಪ್ರಕರಣ ಖಂಡಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಲಾಯಿತು.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಉತ್ತರ ಪ್ರದೇಶದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ಹಾಗೂ ಕಾಂಗ್ರೆಸ್ ನಾಯಕರನ್ನು ಸರ್ಕಾರ ನಡೆಸಿಕೊಂಡ ರೀತಿಯನ್ನು ಎಲ್ಲ ನಾಗರಿಕರು ಖಂಡಿಸಬೇಕು. ಇದೊಂದು ಅನಾಗರಿಕ ಸರ್ಕಾರದ ಕೆಲಸ ಎಂದರು.

ಎಲ್ಲಿ ಮಹಿಳೆಯರಿಗೆ ಮರ್ಯಾದೆ ಇಲ್ಲ, ಎಲ್ಲಿ ಅನಾಗರಿಕ ಸರ್ಕಾರ ಇರುತ್ತದೋ ಅಲ್ಲಿ ಮಾತ್ರ ಇಂಥ ಘಟನೆ ನಡೆಯಲು ಸಾಧ್ಯ. ಯೋಗಿ ಆದಿತ್ಯನಾಥ ಕಾವಿ ಬಟ್ಟೆ ಹಾಕಿಕೊಳ್ಳಲು ನಾಲಾಯಕ್. ಅವರ ವಿರುದ್ಧ 27 ಪ್ರಕರಣಗಳಿದ್ದವು. ಅವರ ವಿರುದ್ಧದ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ. ಅವರು ಮುಖ್ಯಮಂತ್ರಿ ಆಗಲೂ ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚೌಕಿದಾರ್ ಎಂದು ಕರೆಯಿಸಿಕೊಳ್ಳುವ ಪ್ರಧಾನಿ ಮೋದಿ ಯಾವ ರಕ್ಷಣೆಯನ್ನೂ ಮಾಡುತ್ತಿಲ್ಲ. ಮೋದಿಯವರೆ ನಿಮಗೆ ಮಹಿಳೆಯವರ ಬಗ್ಗೆ ಗೌರವ ಇದ್ದರೆ ಆದಿತ್ಯನಾಥರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.

ನಿರ್ಭಯ ಅತ್ಯಾಚಾರವಾದಾಗ ಕೇಂದ್ರ ಹಾಗೂ ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಆಗ ಕಾಂಗ್ರೆಸ್ ಮಾನವೀಯತೆಗೆ ಬೆಲೆ ಕೊಟ್ಟು ಪ್ರತಿಭಟನೆ ಮಾಡಿತ್ತು. ಇದೀಗ ಉತ್ತರಪ್ರದೇಶದಲ್ಲಿ ಅಮಾನವೀಯ ಅತ್ಯಾಚಾರ ನಡೆದರೂ ಬಿಜೆಪಿ ನಾಯಕರು ಮೌನವಹಿಸಿದ್ದು ಸರಿಯಲ್ಲ. ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ ಎಲ್ಲಿದ್ದಾರೆ? ಇಂತಹ ಡೋಂಗಿಗಳು ಈ ರಾಜ್ಯ, ದೇಶವನ್ನು ಆಳುತ್ತಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತು ಒಗೆಯದಿದ್ದರೆ ದೇಶದ ದಲಿತರು, ಮಹಿಳೆಯರಿಗೆ ರಕ್ಷಣೆ ಸಾಧ್ಯವಿಲ್ಲ.

ಬಿಜೆಪಿಯವರು ಮೇಲ್ವರ್ಗದ ಜನರ ರಕ್ಷಣೆ ಮಾಡುತ್ತಾರೆ. ಇದನ್ನು ದೇಶದ ಯುವಕರು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com