ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ವರದಿ ಸಲ್ಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ

ರಾಜ್ಯದ ಪ್ರವಾಸೋದ್ಯಮ ಕೇಂದ್ರಗಳನ್ನು ಗುರುತಿಸಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸಮಗ್ರ ವರದಿಯೊಂದನ್ನು ಸಲ್ಲಿಸಿ ಅನುಮತಿ ಪಡೆಯುವಂತೆ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿನ ಸಭೆ
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿನ ಸಭೆ

ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಕೇಂದ್ರಗಳನ್ನು ಗುರುತಿಸಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸಮಗ್ರ ವರದಿಯೊಂದನ್ನು ಸಲ್ಲಿಸಿ ಅನುಮತಿ ಪಡೆಯುವಂತೆ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಈಗಾಗಲೇ ಗುರುತಿಸಲಾಗಿರುವ ಪ್ರವಾಸೋದ್ಯಮ ಕೇಂದ್ರಗಳ ಸಮಗ್ರ ಅಭಿವೃಧ್ಧಿಗೆ ಇರುವ ತೊಡಕುಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಲು  ಅನುಮತಿ ನೀಡಿದರು.

ಈ ನಿಟ್ಟಿನಲ್ಲಿ ಅಗತ್ಯ ತಿದ್ದುಪಡಿಯೊಂದಿಗೆ ಪ್ರಸ್ತಾವನೆಯನ್ನು ಮಂಡಿಸಲು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ಜಿಲ್ಲೆಗಳನ್ನು ಗುರುತಿಸಿ ಅಧಿಕಾರಿಗಳನ್ನು ನಿಯೋಜಿಸುವಂತೆ ಇಲಾಖಾ ಸಚಿವ ಸಿ.ಟಿ.ರವಿ ಮುಖ್ಯಮಂತ್ರಿಗಳನ್ನು ಕೋರಿದರು. ಜಿಲ್ಲೆಗಳಲ್ಲಿ ಅಧಿಕಾರಿಗಳಿಲ್ಲದೆ ಪ್ರಗತಿ ಪರಿಶೀಲನೆ ಅಸಾಧ್ಯವಾಗಿದೆ ಎಂಬ ಅಂಶವನ್ನು ಅವರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.  

ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿರುವ ಜಿಲ್ಲೆಗಳಲ್ಲಿ ಕೆ.ಎ.ಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರವನ್ನು ನೀಡಬಹುದಾಗಿದೆ.ಪ್ರವಾಸೋದ್ಯಮಕ್ಕೆ ಉತ್ತೇಜನ ಇಲಾಖೆಯ ಮುಖ್ಯ ಧ್ಯೇಯವಾಗಬೇಕಿದ್ದು, ಅಭಿವೃದ್ಧಿ ತಾಣಗಳ ಗುರುತಿಸುವಿಕೆ, ನಿರ್ವಹಣೆ, ಸಂರಕ್ಷಣೆ ಆದ್ಯತೆಯಾಗಬೇಕು ಎಂದು ಅವರು ಹೇಳಿದರು. 

ಜೋಗ ಜಲಪಾತ 120 ಕೋಟಿ ರೂ.ಗಳ ಯೋಜನೆ ಕೆ.ಪಿ.ಸಿ.ಎಲ್ ಮೂಲಕ ಅನುಷ್ಠಾನಕ್ಕೆ ತರಲಾಗುವುದು.ಈ ಮಾಹೆಯ ಅಂತ್ಯದೊಳಗೆ ಯೋಜನೆಯ ವೆಚ್ಚವನ್ನು ಅಂತಿಮಗೊಳಿಸಲಾಗುವುದು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮಾಹಿತಿ ನೀಡಿದರು.

ಕೆಮ್ಮಣ್ಣುಗುಂಡಿ ಮತ್ತು ನಂದಿ ಬೆಟ್ಟದ ಸಮಗ್ರ ಅಭಿವೃದ್ಧಿಯ  ಹೊಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುವಂತೆ   ಪ್ರವಾಸೋದ್ಯಮ ಇಲಾಖಾ ಸಚಿವರು ಸಲಹೆ ಮಾಡಿದರು. ಬಾದಾಮಿ ಅಭಿವೃದ್ಧಿ ಆದ್ಯತೆಯ ಬಗ್ಗೆಯೂ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು.

ಅಂತರರಾಷ್ಟ್ರೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ  ಈ ತಾಣದಲ್ಲಿ ವಿಶ್ವಮಟ್ಟದ ಸೌಲಭ್ಯಗಳನ್ನು  ಕಲ್ಪಿಸಲು ಎ.ಪಿ.ಎಂ.ಸಿ ಭೂಮಿಯನ್ನು ಕೆ.ಎಸ್.ಟಿ.ಡಿ.ಸಿ ಗೆ ಹಸ್ತಾಂತರ ಮಾಡಿ ವಾಹನ ನಿಲ್ದಾಣ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು  ಅಭಿವೃದ್ಧಿ ಪಡಿಸಬೇಕೆಂದು ಸೂಚಿಸಲಾಯಿತು. ಶ್ರೀರಂಗಪಟ್ಟಣ ಹಾಗೂ  ಮೈಸೂರು ಹಾಥ್ ಅಭಿವೃದ್ಧಿಗೆ ಸಂಬಂಧಿಸಿದಂತೆಯೂ ಚರ್ಚೆ ನಡೆಯಿತು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್,  ಕೆ.ಎಸ್.ಟಿ.ಡಿ.ಸಿ ಅಧ್ಯಕ್ಷರಾದ ಶೃತಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com