ನಿಮ್ಮ ಏಕೈಕ ದುಡಿಮೆದಾರರಿಗೆ ಕೊರೋನಾ ಬಂದಿದೆಯೇ? ಕುಟುಂಬಕ್ಕೆ ಉಚಿತ ಆಹಾರ ನೀಡಲು ರಾಜ್ಯ ಸರ್ಕಾರ ಯೋಜನೆ

ಮನೆಯಲ್ಲಿ ಒಬ್ಬರೇ ದುಡಿಯುತ್ತಾ ಇದ್ದು, ಒಂದು ವೇಳೆ ಅವರಿಗೂ ಕೊರೋನಾ ಬಂದರೆ ಆ ಕುಟುಂಬಕ್ಕೆ  ಉಚಿತವಾಗಿ ಆಹಾರ ಮತ್ತು ಧಾನ್ಯಗಳನ್ನು ವಿತರಿಸಲು ರಾಜ್ಯಸರ್ಕಾರ ಯೋಜನೆ ರೂಪಿಸಿದೆ.
ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು: ಮನೆಯಲ್ಲಿ ಒಬ್ಬರೇ ದುಡಿಯುತ್ತಾ ಇದ್ದು, ಒಂದು ವೇಳೆ ಅವರಿಗೂ ಕೊರೋನಾ ಬಂದರೆ ಆ ಕುಟುಂಬಕ್ಕೆ  ಉಚಿತವಾಗಿ ಆಹಾರ ಮತ್ತು ಧಾನ್ಯಗಳನ್ನು ವಿತರಿಸಲು ರಾಜ್ಯಸರ್ಕಾರ ಯೋಜನೆ ರೂಪಿಸಿದೆ.

ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರೊಂದಿಗೆ ಸಂಸದ ಎಂ. ಸಿ. ಮೋಹನ್, ಸಚಿವ ವಿ. ಸೋಮಣ್ಣ, ಶಾಸಕ ಎನ್ ಎ ಹ್ಯಾರಿಸ್ ಮತ್ತು ಕೆಜೆ ಜಾರ್ಜ್ ನಡೆಸಿದ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ.

ಒಂದು ವೇಳೆ ಮನೆಯಲ್ಲಿ ಏಕೈಕ ದುಡಿಮೆದಾರರಿಗೆ ಕೊರೋನಾ ಬಂದರೇ ಆ ಕುಟುಂಬದ ಮುಂದಿನ ಗತಿ ಏನು ಎಂಬುದು ಹಲವು ಕುಟುಂಬಗಳ ಚಿಂತೆಗೆ ಕಾರಣವಾಗಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಆದಾಗ್ಯೂ, ಇದಕ್ಕೆ ಒಪ್ಪಿಗೆ ದೊರೆತಿದ್ದು, ಮುಖ್ಯಮಂತ್ರಿಗಳ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ. ಸೋಂಕು ಹರಡದಂತೆ ತಡೆಗೆ ಹಾಗೂ ಬಡ ಕುಟುಂಬದಲ್ಲಿ ಆತ್ಮಸೈರ್ಯ ಮೂಡಿಸುವಲ್ಲಿ ಈ ಕ್ರಮ ಅಗತ್ಯವಾಗಿದೆ ಎಂದು ವಸತಿ ಸಚಿವ ಸೋಮಣ್ಣ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಇಂತಹ ಕುಟುಂಬಗಳಿಗೆ ಲಾಕ್ ಡೌನ್ ವೇಳೆಯಲ್ಲಿ ಇಸ್ಕಾನ್ ನಿಂದ ಪೂರೈಸಿದ ರೀತಿಯಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್  ಹೇಳಿದರು. ಈ ಬಗ್ಗೆ ಮುಖ್ಯಮಂತ್ರಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.ಕಾರ್ಮಿಕ ಇಲಾಖೆ ಅಥವಾ ಜಿಲ್ಲಾ ಆಡಳಿತದಿಂದ ಕಿಟ್ ಗಳನ್ನು ಪೂರೈಸಲಾಗುವುದು ಎಂದರು.

ಸ್ಲಂಗಳು ಮತ್ತು ಆರ್ಥಿಕವಾಗಿ ಬಡತನ ಎದುರಿಸುತ್ತಿರುವ ಜನರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಮತ್ತು ಜಿಂಕ್ ಮಾತ್ರೆಗಳನ್ನು ವಿತರಿಸಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಮನೆ ಬಾಗಿಲು ಸರ್ವೇ ಆಧಾರದ ಮೇಲೆ ತೀವ್ರ ಗತಿಯಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಮಂಜುನಾಥ್ ಪ್ರಸಾದ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com