ನರೇಂದ್ರ ಮೋದಿ ಮತ್ತು ಬಿ ಎಸ್ ಯಡಿಯೂರಪ್ಪನವರು ಕೊರೋನಾಕ್ಕಿಂತಲೂ ಅಪಾಯಕಾರಿ: ಸಿದ್ದರಾಮಯ್ಯ ಆರೋಪ

ಕೊರೋನಾ ಸೋಂಕಿನಲ್ಲಿ ಭಾರತವನ್ನು ವಿಶ್ವದಲ್ಲಿಯೇ ನಂಬರ್ 1 ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ಸುಕವಾಗಿದ್ದರೆ, ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕರ್ನಾಟಕವನ್ನು ಕೊರೋನಾ ಸೋಂಕಿನಲ್ಲಿ ದೇಶದಲ್ಲಿ ನಂಬರ್ 1 ಮಾಡಲು ಹೊರಟಿದ್ದಾರೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕೊರೋನಾ ಸೋಂಕಿನಲ್ಲಿ ಭಾರತವನ್ನು ವಿಶ್ವದಲ್ಲಿಯೇ ನಂಬರ್ 1 ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ಸುಕವಾಗಿದ್ದರೆ, ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕರ್ನಾಟಕವನ್ನು ಕೊರೋನಾ ಸೋಂಕಿನಲ್ಲಿ ದೇಶದಲ್ಲಿ ನಂಬರ್ 1 ಮಾಡಲು ಹೊರಟಿದ್ದಾರೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿರುವ ಅವರು, ಈ ಇಬ್ಬರು ನಾಯಕರು ದೇಶಕ್ಕೆ ಮತ್ತು ರಾಜ್ಯಕ್ಕೆ ಕೊರೋನಾಕ್ಕಿಂತಲೂ ಅಪಾಯಕಾರಿ, ಕೊರೊನಾ ಸೋಂಕಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ತಮ್ಮ ದುರಾಡಳಿತದ ಮೂಲಕ ಮೋದಿ ಹಾಗೂ ಯಡಿಯೂರಪ್ಪ ಜೋಡಿ ದೇಶವನ್ನು ಮತ್ತು ರಾಜ್ಯವನ್ನು ಕೊರೊನಾ ಸೋಂಕಿನಲ್ಲಿ ಮೊದಲ ಸ್ಥಾನಕ್ಕೇರಿಸಲು ಪಣತೊಟ್ಟಂತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೊರೋನಾ ನಿಯಂತ್ರಿಸುವಲ್ಲಿ ಬಿಎಸ್ ವೈ ಸರ್ಕಾರ ಸಂಪೂರ್ಣವಾಗಿ ಸೋತಿದೆ. ಆಡಳಿತ ವೈಫಲ್ಯದಿಂದ ಖಾಲಿಯಾಗಿರುವ ಖಜಾನೆ ತುಂಬಿಸಲು ಎಲ್ಲವನ್ನೂ ತೆರೆದು ಜನತೆಗೆ ಸರ್ಕಾರ ದ್ರೋಹ ಮಾಡುತ್ತಿದೆ. ರಾಜ್ಯದಲ್ಲಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಸರಿಯಾಗಿ ಜನರಿಗೆ ಸಿಗುತ್ತಿಲ್ಲ, ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆ ಮೇಲೆ ನಂಬಿಕೆ ಇಲ್ಲ, ಖಾಸಗಿ ಆಸ್ಪತ್ರೆಗೆ ಹೋಗಲು ಕೈಯಲ್ಲಿ ದುಡ್ಡಿಲ್ಲ. ಇದರಿಂದಾಗಿ ಪರೀಕ್ಷೆ ಮಾಡಿಸಿಕೊಳ್ಳದೆ, ಸರಿಯಾದ ಚಿಕಿತ್ಸೆ ಪಡೆಯದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಸಿದ್ದರಾಮಯ್ಯ.

ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇಲ್ಲ, ಸರ್ಕಾರದ ನಿಯಮಗಳನ್ನು ಖಾಸಗಿ ಆಸ್ಪತ್ರೆಗಳು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಸಹ ಆರೋಪಿಸಿದ್ದಾರೆ.

ಸದ್ಯಕ್ಕೆ ಶಾಲೆ, ಕಾಲೇಜು ಬೇಡ: ಇನ್ನು ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಂದೆ-ತಾಯಿ ಒಪ್ಪಲಿ, ಒಪ್ಪದೆ ಇರಲಿ ಯಾವುದೇ ಕಾರಣಕ್ಕೂ ಶಾಲೆ, ಕಾಲೇಜುಗಳನ್ನು ಪುನರಾರಂಭಿಸಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆಯುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com