ಕೆಲಸ ಇಲ್ಲ, ಕೈಯಲ್ಲಿ ಹಣವಿಲ್ಲ: ಅಸಂಘಟಿತ ವಲಯ ಕಾರ್ಮಿಕರ ಕಷ್ಟ ಕೇಳೋರಿಲ್ಲ, ಇದು ಕೊರೋನಾ ಎಫೆಕ್ಟ್!

ಕೊರೋನಾ ಲಾಕ್ ಡೌನ್ ನಂತರ ಉಂಟಾಗಿರುವ ಆರ್ಥಿಕ ದುಸ್ಥಿತಿ ಅಸಂಘಟಿತ ವಲಯ ಕಾರ್ಮಿಕರ ಮೇಲೆ ತೀವ್ರವಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರು ಉದ್ಯೋಗವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಲಾಕ್ ಡೌನ್ ನಂತರ ಉಂಟಾಗಿರುವ ಆರ್ಥಿಕ ದುಸ್ಥಿತಿ ಅಸಂಘಟಿತ ವಲಯ ಕಾರ್ಮಿಕರ ಮೇಲೆ ತೀವ್ರವಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರು ಉದ್ಯೋಗವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ಹಲವರಿಗೆ ಮುಂದೇನು ಮಾಡುವುದೆಂದು ಗೊತ್ತಾಗದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ಲಾಕ್ ಡೌನ್ ಹೇರಿಕೆಯಾದ ನಂತರ ಮನೆಗೆಲಸ ಮಾಡುವ ಕಾರ್ಮಿಕರಲ್ಲಿ ಬಹುತೇಕರಿಗೆ ಉದ್ಯೋಗವಿಲ್ಲದಂತಾಗಿದೆ. ಉದ್ಯೋಗದಾತರು ಕೊರೋನಾ ಭಯದಿಂದ, ತಮ್ಮ ಉದ್ಯೋಗದಲ್ಲಿ ವೇತನ ಕಡಿತವಾಗಿ ಮನೆಗೆಲಸದವರನ್ನು ಕೆಲಸದಿಂದ ಕೈಬಿಟ್ಟಿದ್ದಾರೆ. ಫಾರ್ಮ್ ಹೌಸ್, ರೆಸಾರ್ಟ್ಸ್ ಮತ್ತು ಹೋಂ ಸ್ಟೇಗಳಿಂದ ಮಾಲೀಕರು ಹಲವರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.

ಬಹುತೇಕ ಅಸಂಘಟಿತ ವಲಯ ಕಾರ್ಮಿಕರು ಪುರುಷ ಕಾರ್ಮಿಕರಾಗಿದ್ದು ಅವರ ಪತ್ನಿಯರು ಮನೆಗೆಲಸ ಮಾಡುತ್ತಿರುತ್ತಾರೆ. ಲಾಕ್ ಡೌನ್ ನಿಂದ ಗಂಡ-ಹೆಂಡತಿ ಇಬ್ಬರೂ ಉದ್ಯೋಗ ಕಳೆದುಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆಂದು ಫೈನಾನ್ಸ್ ಗಳಿಂದ ಸಾಲ ತೆಗೆದುಕೊಂಡವರು ಅದನ್ನು ವಾಪಸ್ ಕಟ್ಟಲು ಕಷ್ಟಪಡುತ್ತಿದ್ದಾರೆ. ತಿಂಗಳ ಮೊತ್ತ ತಡವಾಗಿ ಪಾವತಿಸಿದರೆ ಬಡ್ಡಿ ಸೇರಿಸಿ ಕಟ್ಟಬೇಕಾಗುತ್ತದೆ.

ಕರ್ನಾಟಕದಲ್ಲಿ ಕನಿಷ್ಠ 3 ಲಕ್ಷದ 75 ಸಾವಿರದ 585 ಮನೆಗೆಲಸದವರಿದ್ದು ಬೆಂಗಳೂರು ನಗರವೊಂದರಲ್ಲಿಯೇ 70 ಸಾವಿರದ 791 ಮಂದಿ ಇದ್ದಾರೆ. ಕಾರ್ಮಿಕ ಇಲಾಖೆ ಪ್ರಕಾರ, 46 ಸಾವಿರ ಸ್ಮಾರ್ಟ್ ಕಾರ್ಡುಗಳನ್ನು ಅಸಂಘಟಿತ ವಲಯ ಕಾರ್ಮಿಕರ ದಾಖಲಾತಿಗೆ ನೀಡಲಾಗಿದೆ.

ರಾಜ್ಯದಲ್ಲಿ ಸುಮಾರು 3 ಕೋಟಿ ಜನ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಕೇವಲ 85 ಸಾವಿರ ಮಂದಿ ಕರ್ನಾಟಕ ರಾಜ್ಯ ಅಸಂಘಟಿತ ವಲಯಗಳ ಅಭಿವೃದ್ಧಿ ಮಂಡಳಿಯಲ್ಲಿ ದಾಖಲಾತಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಅಸಂಘಟಿತ ವಲಯ ಕಾರ್ಮಿಕರ ಅಭಿವೃದ್ಧಿಗೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ.

ಅಸಂಘಟಿತ ವಲಯದಲ್ಲಿ ಉದಾಹರಣೆಗೆ ಡ್ರೈವರ್ ಗಳು, ರೈತರು,ಮನೆಗೆಲಸದವರು ಮತ್ತು ಇತರರಿಗಾಗಿ ರಾಜ್ಯ ಸರ್ಕಾರ ಸಾವಿರದ 610 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದು ಅವು ಹೇಗೆ ಬಳಕೆಯಾಗುತ್ತಿದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಅವರ ಖಾತೆಗಳಿಗೆ ಹಣ ವರ್ಗಾಯಿಸಬೇಕೆಂದರೆ ನಮಗೆ ದಾಖಲೆಗಳು ಬೇಕು ಎನ್ನುತ್ತಾರೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್.
ಲಾಕ್ ಡೌನ್ ಗಿಂತ ಮೊದಲು ತಿಂಗಳಿಗೆ ನಾನು 15ರಿಂದ 20 ಸಾವಿರ ರೂಪಾಯಿ ದುಡಿಯುತ್ತಿದೆ. ಇದೀಗ ವಾರಕ್ಕೆ ಒಂದು ಬಾರಿ ಏರ್ ಪೋರ್ಟ್ ಗೆ ಡ್ರಾಪ್ ಮಾಡಲು ಸಿಗುತ್ತಿದೆಯಷ್ಟೆ, ಹೇಗೆ ಜೀವನ ಸಾಗಿಸುವುದು ಎಂದು ಮೈಸೂರಿನ 38 ವರ್ಷದ ಟ್ಯಾಕ್ಸಿ ಡ್ರೈವರ್ ತೀರ್ಥ ಕುಮಾರ್ ಹೇಳುತ್ತಾರೆ.

ಬಿಪಿಎಲ್ ಕಾರ್ಡು ಇರುವುದರಿಂದ ಊಟಕ್ಕೆ ಸಮಸ್ಯೆಯಿಲ್ಲ, ಆದರೆ ಮನೆ ಬಾಡಿಗೆ ಕಟ್ಟದೆ ಎಷ್ಟೋ ಸಮಯಗಳಾಯಿತು, ಮಾಲೀಕರು ಯಾವಾಗ ಖಾಲಿ ಮಾಡಲು ಹೇಳುತ್ತಾರೋ ಎಂದು ಭಯವಾಗುತ್ತಿದೆ ಎನ್ನುತ್ತಾರೆ.

ಅಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಶಾಂತಪ್ಪ ಕೋರಿ, ಬೆಂಗಳೂರು ಏರ್ ಪೋರ್ಟ್ ಹತ್ತಿರ ಸಣ್ಣ ಹೊಟೇಲ್ ನಡೆಸುತ್ತಿದ್ದರು. ಕಲಬುರಗಿಯ ಪಟ್ಟಣ್ ಗ್ರಾಮದ ರಾಜೇಂದ್ರ ಕುಮಾರ್ ಬೆಂಗಳೂರಿನಲ್ಲಿ ಬಸ್ ಚಾಲಕರಾಗಿದ್ದರು. ಇದೀಗ ಕೊರೋನಾ ಲಾಕ್ ಡೌನ್ ನಂತರ ಜೀವನ ನಡೆಸಲು ಅವರಿಗೆ ಕಷ್ಟವಾಗುತ್ತಿದೆ.

ಶಾಂತಪ್ಪ ತಮ್ಮ ಹೊಟೇಲ್ ನ್ನು ಕಳೆದ ಮಾರ್ಚ್ ನಲ್ಲಿ ಮುಚ್ಚಿದ್ದರೆ. ರಾಜೇಂದ್ರ ಕುಮಾರ್ ಊರಲ್ಲಿ ಇರುವ ಸಣ್ಣ ಭೂಮಿಯಲ್ಲಿ ಕೆಲಸ ಮಾಡಿ ನೆಲಗಡಲೆ, ಹೂವು ಬೆಳೆದು ಮಾರಾಟ ಮಾಡಿ ದಿನಕ್ಕೆ 250 ರೂಪಾಯಿ ದುಡಿಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com