ಶಿಕ್ಷಣದಲ್ಲಿ ಪ್ರಥಮ ಭಾಷೆ ಕನ್ನಡಕ್ಕೆ ತಮಿಳುನಾಡು ಕನ್ನಡಿಗರ ಆಗ್ರಹ!

ಶಿಕ್ಷಣದಲ್ಲಿ ತಮಿಳು ಭಾಷೆಯನ್ನು ಕಡ್ಡಾಯ ಮಾಡುವಂತೆ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಶಿಕ್ಷಣದಲ್ಲಿ ತಮಿಳು ಭಾಷೆಯನ್ನು ಕಡ್ಡಾಯ ಮಾಡುವಂತೆ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

1 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಪ್ರಥಮ ಭಾಷೆಯಾಗಿ ತಮಿಳು ಭಾಷೆಯನ್ನು ಕಡ್ಡಾಯವಾಗಿ ಮಾಡಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿರುವ ಕನ್ನಡಿಗರು ಹಾಗೂ ತಮಿಳೇತರರಿಗೆ ಅನ್ಯಾಯ ಮಾಡಿದಂತಾಗಿದೆ. 

ತಮಿಳು ಭಾಷೆಯನ್ನು ಕಡ್ಡಾಯವಾಗಿ ಹೇರಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿರುವ ಈರೋಡ್ ಮತ್ತು ಕೃಷ್ಣಗಿರಿ ಗಡಿಯಲ್ಲಿರುವ ಕನ್ನಡಿಗರು. ತಮಿಳುನಾಡು ಸರ್ಕಾರವು ಕನ್ನಡವನ್ನು ಬೋಧನಾ ಮಾಧ್ಯಮವಾಗಿ ಮತ್ತು ಮೊದಲ ಭಾಷೆಯಾಗಿ ಉಳಿಸಬೇಕೆಂದು ಆಗ್ರಹಿಸಿದ್ದಾರೆ. 

ಈರೋಡ್ ಜಿಲ್ಲೆಯ ತಳವಾಡಿ ತಾಲೂಕಿನಲ್ಲಿ ಶೇ.80ರಷ್ಟು ಕನ್ನಡಿಗರಿದ್ದು, ಇಲ್ಲಿ 28ಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಕಾಲೇಜುಗಳಿವೆ. ಈ ಹಿಂದೆ ತಮಿಳು ಭಾಷೆಯನ್ನು ಹೇರಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಕನ್ನಡಿಗರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ಆದೇಶ ಹೊರಡಿಸಿದ್ದ ನ್ಯಾಯಾಲಯ 2022ರವರೆಗೂ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯಾಗಿಸಬೇಕೆಂದು ತಿಳಿಸಿತ್ತು. 

ಇದೀಗ ಮತ್ತೆ ತಮಿಳು ಭಾಷೆಯನ್ನು ಹೇರಿರುವ ಹಿನ್ನೆಲೆಯಲ್ಲಿ ಗಡಿ ಭಾಗದ ಕನ್ನಡಿಗರು ಕೆಂಡಾಮಂಡಲಗೊಂಡಿದ್ದು, ಈ ಕುರಿತು ಮುಖ್ಯಮಂತ್ರಿ ಯಿಯೂರಪ್ಪ ಅವರು ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಆಗ್ರಹಿಸಿದ್ದಾರೆ. 

ಕನ್ನಡ ಪರ ಹೋರಾಟಗಾರ ಚನ್ನನಂಜಪ್ಪ ಮಾತನಾಡಿ, ಕನ್ನಡ ಶಾಲೆಗಳಲ್ಲಿ ತಮಿಳು ಭಾಷೆಯನ್ನು ಹೇರಿಕೆ ಮಾಡುವ ಬದಲು ಸರ್ಕಾರ ಜನರ ಭಾವನೆಗಳನ್ನು ಗೌರವಿಸಬೇಕು. ಕನ್ನಡ ಮಾಧ್ಯಮವನ್ನು ಹೊಂದಿರುವ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ತಮಿಳು ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ಹೇಳಿದ್ದಾರೆ. 

ಕನ್ನಡ ಮಾಧ್ಯ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿಲ್ಲ. ಶಿಕ್ಷಕರ ನೇಮಕ ಮಾಡದ ಹಿನ್ನೆಲೆಯಲ್ಲಿ ಚಿಕ್ಕಹಳ್ಳಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಸಂಖ್ಯೆಗಳು ಕಡಿಮೆಯಾಗುತ್ತಿವೆ. ಪ್ರೌಢ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆಯಿದ್ದರೂ ವಿದ್ಯಾರ್ಥಿಗಳ ಸಾಮರ್ಥ್ಯವು ಉತ್ತಮವಾಗಿದೆ ಶಿವಕುಮಾರ್ ಎಂಬುವವರು ಹೇಳಿದ್ದಾರೆ. 

ಈ ನಡುವೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖಮಂತ್ರಿ ಚಂದ್ರು ಅವರು ತಲಾವಾಡಿಗೆ ಭೇಟಿ ನೀಡಿದ್ದು, ಜಾನಪದ ಕಾರ್ಯಕ್ರಮಗಳನ್ನು ನಡೆಸಿದರು. ಈ ವೇಶೆ ವಿದ್ಯಾರ್ಥಿವೇತನವನ್ನು ಘೋಷಿಸುವ ಮೂಲಕ ಕನ್ನಡಿಗರಲ್ಲಿ ವಿಶ್ವಾಸ ಮೂಡಿಸಿದರು.

ವಾಟಾಳ್ ನಾಗರಾಜ್ ಅವರು ಮಾತನಾಡಿ, ಕರ್ನಾಟಕದಲ್ಲಿ ತಮಿಳು ಶಾಲೆಗಳನ್ನು ಪುನರಾರಂಭಿಸುವಂತೆ ಆಗ್ರಹಿಸುವುದಕ್ಕೂ ಮುನ್ನ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಗಳು ಮೊದಲು ತನ್ನದೇ ರಾಜ್ಯದ ಕನ್ನಡ ಶಾಲೆಗಳ ಸ್ಥಿತಿಯತ್ತ ಗಮನಹರಿಸಬೇಕೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com