ವಿದ್ಯಾಗಮ ಕಾರ್ಯಕ್ರಮದಿಂದಲೇ ಮಕ್ಕಳು ಮತ್ತು ಶಿಕ್ಷಕರಲ್ಲಿ ಕೊರೋನಾ ಹರಡುತ್ತಿದೆ: ಪೋಷಕರ ಆರೋಪ

ಇತ್ತೀಚೆಗೆ ರಾಮದುರ್ಗ ತಾಲ್ಲೂಕಿನ ತಿಮ್ಮಾಪುರ ಮತ್ತು ಸುತ್ತಮುತ್ತಲ ಗ್ರಾಮಗಳ ಸುಮಾರು 25 ಮಕ್ಕಳು ಮತ್ತು 6 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಗ್ರಾಮಸ್ಥರನ್ನು ಕಂಗೆಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಥಣಿ/ಕಲಬುರಗಿ: ಇತ್ತೀಚೆಗೆ ರಾಮದುರ್ಗ ತಾಲ್ಲೂಕಿನ ತಿಮ್ಮಾಪುರ ಮತ್ತು ಸುತ್ತಮುತ್ತಲ ಗ್ರಾಮಗಳ ಸುಮಾರು 25 ಮಕ್ಕಳು ಮತ್ತು 6 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಗ್ರಾಮಸ್ಥರನ್ನು ಕಂಗೆಡಿಸಿದೆ.

ಮಕ್ಕಳಿಗೆ ಸೋಂಕು ತಗುಲಲು ಸರ್ಕಾರದ ವಿದ್ಯಾಗಮ ಕಾರ್ಯಕ್ರಮವೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಇದೀಗ ಗ್ರಾಮಸ್ಥರು ಪ್ರಾಥಮಿಕ ಶಾಲಾ ಶಿಕ್ಷಕರು ಊರೊಳಗೆ ಪ್ರವೇಶಿಸಲು ಬಿಡುತ್ತಿಲ್ಲ.

ಮಕ್ಕಳಿಗೆ ಕೊರೋನಾ ಮಧ್ಯೆ ತರಗತಿಗಳು, ಕಲಿಕೆ ವಿಷಯದಲ್ಲಿ ಹಿಂದುಳಿಯಬಾರದು ಎಂದು ಹಳ್ಳಿಗಳಲ್ಲಿ ಆನ್ ಲೈನ್ ತರಗತಿಗಳಿಗೆ ಕಷ್ಟವಾಗುತ್ತದೆ ಎಂದು ರಾಜ್ಯ ಸರ್ಕಾರ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಿತ್ತು. ಶಿಕ್ಷಕರು ಗ್ರಾಮಗಳಿಗೆ ಹೋಗಿ ತೆರೆದ ಪ್ರದೇಶದಲ್ಲಿ ಶಾರೀರಿಕ ಅಂತರ ಕಾಯ್ದುಕೊಂಡು ಮಕ್ಕಳ ಸಣ್ಣ ಸಣ್ಣ ಗುಂಪು ಮಾಡಿಕೊಂಡು ಪಾಠ ಹೇಳಿಕೊಡುವುದು ವಿದ್ಯಾಗಮ ಕಾರ್ಯಕ್ರಮವಾಗಿದೆ.

100ಕ್ಕೂ ಹೆಚ್ಚು ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗಿರುವ ಸಾಧ್ಯತೆಯಿದ್ದು ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಗ್ರಾಮಗಳಿಗೆ ಪ್ರವೇಶ ನೀಡುತ್ತಿಲ್ಲ. ಚಿಕ್ಕೋಡಿಯಲ್ಲಿ 18 ಶಿಕ್ಷಕರಿಗೆ ಕೊರೋನಾ ತಗಲಿದೆ, ಮೂವರು ಶಿಕ್ಷಕರು ಬಲಿಯಾಗಿದ್ದಾರೆ.

ಕಲಬುರಗಿ ಜಿಲ್ಲೆಯ ಅಫ್ಜಲ್ ಪುರ ತಾಲ್ಲೂಕಿನ ಮಾಶಲ್ ಗ್ರಾಮದ ವಟಾರ ಶಾಲೆಯಲ್ಲಿ ಕಲಿಯುತ್ತಿರುವ ನಾಲ್ವರು ಮಕ್ಕಳಿಗೆ ಕಳೆದ ಗುರುವಾರ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ 15 ದಿನಗಳ ಕಾಲ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಗಮ ಕಾರ್ಯಕ್ರಮವನ್ನು ಇಲ್ಲಿ ಮುಚ್ಚಿದೆ.

ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್ ಪಿ ಬಡಗುಂಡಿ, 15 ದಿನಗಳ ಹಿಂದೆ ಶಾಲಾ ಮುಖ್ಯೋಪಾಧ್ಯಾಯರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. 250 ಮಕ್ಕಳಿಗೆ ಆರ್ ಟಿ-ಪಿಸಿಆರ್ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ ನಾಲ್ವರಿಗೆ ಪಾಸಿಟಿವ್ ಬಂದಿದೆ. 24 ಮಕ್ಕಳ ಕೊರೋನಾ ಪರೀಕ್ಷೆ ವರದಿ ಇನ್ನೂ ಸಿಕ್ಕಿಲ್ಲ.

ಸರ್ಕಾರ ಶಾಲೆಗೆ ಮಾಸ್ಕ್, ಸ್ಯಾನಿಟೈಸರ್ ಕೊಟ್ಟಿಲ್ಲ ಎಂದು ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಲಕ್ಷ್ಮಣ್ ಹೇಳುತ್ತಾರೆ. ಮಾಶಲ್ ಹತ್ತಿರವಿರುವ 18 ವಟಾರ ಶಾಲೆಯ ವಿದ್ಯಾರ್ಥಿಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com