ಬಾಗಲಕೋಟೆ: ಡಿಸಿಡಿ ನಿರ್ದೇಶಕರ ಚುನಾವಣೆ; ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಹುಟ್ಟಿಕೊಂಡಿದೆ ಅಸಮಾಧಾನದ ಬೆಂಕಿ

ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಶಕ್ತಿ ಕೇಂದ್ರ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳ ಆಯ್ಕೆ ಗೆ ಚುನಾವಣೆ ದಿನಾಂಕ ನಿಗದಿ ಅಗಿರುವ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ವಿದ್ಯಮಾನಗಳು ಚಿಗುರೊಡಡೆದಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಶಕ್ತಿ ಕೇಂದ್ರ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳ ಆಯ್ಕೆ ಗೆ ಚುನಾವಣೆ ದಿನಾಂಕ ನಿಗದಿ ಅಗಿರುವ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ವಿದ್ಯಮಾನಗಳು ಚಿಗುರೊಡಡೆದಿವೆ.

ಪ್ರಮುಖ ರಾಜಕೀಯ ಪಕ್ಷಗಳ ಹಿರಿ ತಲೆಗಳು ಡಿಸಿಸಿ ಪ್ರವೇಶಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಆಯಾ ಪಕ್ಷಗಳಲ್ಲಿನ ಪ್ರಮುಖ ಕಾರ್ಯಕರ್ತರಲ್ಲಿ  ಅಸಮಾಧಾನದ ಬೆಂಕಿ ಕಾಣಿಸಿಕೊಂಡಿದೆ. ಸಣ್ಣದಾಗಿ ಹುಟ್ಟಿಕೊಂಡಿರುವ ಸಮಾಧಾನದ ಬೆಂಕಿಯಲ್ಲಿ ಯಾರು ಅರಳುತ್ತಾರೋ, ಯಾರು ಕಮರಿ ಹೋಗುತ್ತಾರೋ  ಎನ್ನುವುದೇ ಬಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡಲಾರಂಭಿಸಿದೆ. ಪಕ್ಷ ಮತ್ತು ಸರ್ಕಾರ ಎರಡರಲ್ಲೂ  ತಮಗೆ ಲಾಭದಾಯಕ ಹುದ್ದೆಗಳು ಬೇಕು ಎನ್ನುವ ಮನೋಭಾವಕ್ಕೆ  ಹಿರಿ ತಲೆಗಳು ಜೋತು ಬಿದ್ದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಅಖಾಡದಲ್ಲಿ ಅಸಮಾಧಾನದ ಹೋಗೆಯಾಡಲಾರಂಭಿಸಿದೆ.

ಅಖಂಡ ವಿಜಯಪುರ ಜಿಲ್ಲೆಯಿಂದ ವಿಭಜನೆಗೊಂಡು ಹೊಸದಾಗಿ ಅಸ್ತಿತ್ವಕ್ಕೆ ಬಂದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಕೆಲವರು ಕಾಯಂ ನಿರ್ದೇಶಕರಾಗಿದ್ದಾರೆ. ಈ ಬಾರಿಯಂತೂ ಮತ್ತಷ್ಟು ಜನ ಹಾಲಿ, ಮಾಜಿ ಶಾಸಕರು ಮತ್ತು ಸಂಸದರೇ ಅಖಡಕ್ಕೆ ಇಳಿಯಲು ಮುಂದಾಗಿದ್ದಾರೆ. ಇದರಿಂದಾಗಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಇತರ ಪ್ರಮುಖ ಕಾರ್ಯಕರ್ತರಿಗೆ ಅವಕಾಶಗಳು ಗಗನಕುಸುಮವಾಗಿ ಅಸಮಾಧಾನ ಎನ್ನುವುದು ನಿಗಿನಿಗಿಯಾಗಿ ಉರಿಯತೊಡಗಿದೆ.
ಡಿಸಿಸಿ ಹಾಲಿ ನಿರ್ದೇಶಕ ಕುಮಾರಗೌಡ ಜನಾಲಿ ಅವರಿಗೆ ಸಂಸದ ಗದ್ದಿಗೌಡರ, ಇನ್ನೋರ್ವ ಹಾಲಿ ನಿರ್ದೇಶಕ ಭೀಮಶಿ ಮಗದುಮ್ ಅವರಿಗೆ ತೇರದಾಳ ಶಾಸಕ ಸಿದ್ದು ಸವದಿ ಅಡ್ಡಗಾಲಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಈಗಾಗಲೇ  ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್. ಆರ್.ಪಾಟೀಲ, ಮೇಲ್ಮನೆ ಸದಸ್ಯ  ಎಚ್. ಆರ್. ನಿರಾಣಿ, ಮಾಜಿ ಸಚಿವರಾದ ಅಜಯಕುಮಾರ ಸರನಾಯಕ, ಎಚ್.ವೈ. ಮೇಟಿ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ ಡಿಸಿಸಿ ನಿರ್ದೇಶಕರಾಗಿದ್ದು, ಮತ್ತೊಂದು ಅವಧಿಗೆ ಮುಂದುವರಿಯಲು ಶತ ಪ್ರಯತ್ನ ನಡೆಸಿದ್ದಾರೆ.

ಸಂಸದರು, ಶಾಸಕರು, ಮಾಜಿ ಸಚಿವರೆ ಅಧಿಕಾರ ರಾಜಕಾರಣಕ್ಕೆ ಅಂಟಿಕೊಂಡಿರುವುದು ಪ್ರಮುಖ ಪಕ್ಷಗಳಲ್ಲಿನ ಆಕಾಂಕ್ಷಿ ಕಾರ್ಯಕರ್ತರ ಇರುಸು ಮುರುಸಿಗೆ ಕಾರಣವಾಗಿದೆ. ಹಾಗಾಗಿ ಸದ್ಯ ಹುಟ್ಟಿಕೊಂಡಿರುವ ಅಸಮಾಧಾನದ ಬೆಂಕಿಗೆ ಕೆಲ ಹಿರಿ ತಲೆಗಳ ಆಹುತಿ ಆಗಲಿದೆ ಎನ್ನುವ ಲೆಕ್ಕಾಚಾರ ಆರಂಭಗೊಂಡಿವೆ.  ಪ್ರಮುಖ ಪಕ್ಷಗಳಲ್ಲಿನ ಹಿರಿಯರು ಸದ್ಯ ಹುಟ್ಟಿಕೊಂಡಿರುವ ಅಸಮಾಧಾನದ ಬೆಂಕಿಯನ್ನು ಹೇಗೆ ನಂದಿಸುತ್ತಾರೆ ಎನ್ನುವುದು ಕುತೂಹಲದ ಸಂಗತಿಯಾಗಿದೆ. ಸದ್ಯದ ಅಸಮಾಧಾನದ ಬಗೆಗೆ ಸ್ವಲ್ಪವೇ ನಿರ್ಲಕ್ಷ ಮಾಡಿದರೂ ಚುನಾವಣೆ ಅಖಾಡಲ್ಲಿ ಉಳಿಯುವ ಹಿರಿ ತಲೆಗಳಿಗೆ ಆತಂಕ ತಪ್ಪಿದ್ದಲ್ಲ ಎನ್ನುವ ಮಾತುಗಳು  ವ್ಯಾಪಕವಾಗಿವೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆ ದಿನದ ವರೆಗೂ ಅಸಮಾಧಾನ ತಣ್ಣಗಾಗಿಸುವ ಕೆಲಸವೇ ನಡೆಯಲಿದೆ.ಈ ವೇಳೆ ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com