ನೂತನ ಕೃಷಿ ನೀತಿ ಎಪಿಎಂಸಿಗಳನ್ನು ಮುಚ್ಚುವಂತೆ ಮಾಡುವುದಿಲ್ಲ: ಶೋಭಾ ಕರಂದ್ಲಾಜೆ
ಕೃಷಿ ಮಸೂದೆಗಳು ಜಾರಿಯಾದರೆ ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ, ಎಪಿಎಂಸಿಗಳು ಮುಚ್ಚಲಿವೆ ಎಂದು ಪ್ರತಿಪಕ್ಷಗಳು ಆರೋಪಿಸಿ ಪ್ರತಿಭಟನೆ ಮಾಡುತ್ತಿವೆ. ವಾಸ್ತವವಾಗಿ ಎಪಿಎಂಸಿಗಳನ್ನು ಮುಚ್ಚುವುದಿಲ್ಲ, ಕನಿಷ್ಠ ಬೆಂಬಲ ಬೆಲೆಯನ್ನು ರದ್ದು ಮಾಡುವುದಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Published: 11th October 2020 08:45 AM | Last Updated: 11th October 2020 08:45 AM | A+A A-

ಶೋಭಾ ಕರಂದ್ಲಾಜೆ
ಉಡುಪಿ: ಕೃಷಿ ಮಸೂದೆಗಳು ಜಾರಿಯಾದರೆ ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ, ಎಪಿಎಂಸಿಗಳು ಮುಚ್ಚಲಿವೆ ಎಂದು ಪ್ರತಿಪಕ್ಷಗಳು ಆರೋಪಿಸಿ ಪ್ರತಿಭಟನೆ ಮಾಡುತ್ತಿವೆ. ವಾಸ್ತವವಾಗಿ ಎಪಿಎಂಸಿಗಳನ್ನು ಮುಚ್ಚುವುದಿಲ್ಲ, ಕನಿಷ್ಠ ಬೆಂಬಲ ಬೆಲೆಯನ್ನು ರದ್ದು ಮಾಡುವುದಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ 3 ಮಸೂದೆಗಳನ್ನು ವಿರೋಧಿಸುತ್ತಿರುವವರು ಅವುಗಳನ್ನು ಅಧ್ಯಯನವೇ ಮಾಡಿಲ್ಲ. ಮಾಡಿದ್ದರೆ ವಿರೋಧಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಈ ಮಸೂದೆಗಳನ್ನು ವಿರೋಧಿಸುವವರು ದೇಶದಲ್ಲಿ ಎಪಿಎಂಸಿಗಳು ರದ್ದಾಗುತ್ತಿವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಮೂರೂ ಮಸೂದೆಗಳಲ್ಲಿ ಎಲ್ಲಿಯೂ ಹಾಗೇ ಹೇಳಿಲ್ಲ. ಬದಲಿಗೆ ರೈತರಿಗೆ ಎಪಿಎಂಸಿಗಳಲ್ಲಿ ಶೋಷಣೆಯಾಗುತ್ತಿದ್ದರೆ ಅವರು ತಮ್ಮ ಉತ್ಪನ್ನಗಳನ್ನು ಬೇರೆಡೆಗೆ ಮಾರಬಹದು ಎಂದಷ್ಟೇ ಹೇಳಿದೆ.
ದಯವಿಟ್ಟು ವಿರೋಧಿಸುವವರು ಈ ಮಸೂದೆಗಳನ್ನು ಅಧ್ಯಯನ ಮಾಡಿ, 300 ಪುಟಗಳಿವೆ. ಅಷ್ಟನ್ನೂ ಓದುವುದು ಕಷ್ಟ ಅಂತಾದರೇ ಕನಿಷ್ಟ ಅವುಗಳನ್ನು ಸಾರಾಂಶವನ್ನಾದರೂ ತಿಳಿದುಕೊಳ್ಳಿ. ರೈತರನ್ನು ದಾರಿ ತಪ್ಪಿಸಬೇಡಿ ಎಂದು ಶೋಭಾ ಸಲಹೆ ನೀಡಿದ್ದಾರೆ.
ಯಾವುದೇ ಮಸೂದೆಯ ಸಾಧಕ ಬಾಧಕಗಳನ್ನು ತಿಳಿಯಬೇಕಾದರೆ ಜಾರಿಯಾಗಿ ಕನಿಷ್ಟ ಒಂದು ವರ್ಷವಾದರೂ ಬೇಕಾಗುತ್ತದೆ. ಆನಂತರವೂ ಸಂಸತ್ತು ಸೇರುತ್ತದೆ. ಈ ಕಾಯ್ದೆಗೆ ತಿದ್ದುಪಡಿಗಳೇನಾದರೂ ಬೇಕಾಗಿದ್ದರೆ ಮಾಡಬಹುದು ಎಂದು ತಿಳಿಸಿದ್ದಾರೆ.