ಚಾಮರಾಜನಗರ ಕಾರಾಗೃಹದ 16 ಮಂದಿ ಕೈದಿಗಳಿಗೆ ಸೋಂಕು

ಕೊರೊನಾ ಮಹಾಮಾರಿ ಈಗ ನಾಲ್ಕುಗೋಡೆಗಳನ್ನೇ ಪ್ರಪಂಚ ಮಾಡಿಕೊಂಡಿದ್ದ ವಿಚಾರಣಾಧೀನ ಕೈದಿಗಳಿಗೂ ತಗುಲುವ ಮೂಲಕ ಸಹ ಕೈದಿಗಳಿಗೆ, ಸಿಬ್ಬಂದಿಗೆ ಆತಂಕ ತರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಕೊರೊನಾ ಮಹಾಮಾರಿ ಈಗ ನಾಲ್ಕುಗೋಡೆಗಳನ್ನೇ ಪ್ರಪಂಚ ಮಾಡಿಕೊಂಡಿದ್ದ ವಿಚಾರಣಾಧೀನ ಕೈದಿಗಳಿಗೂ ತಗುಲುವ ಮೂಲಕ ಸಹ ಕೈದಿಗಳಿಗೆ, ಸಿಬ್ಬಂದಿಗೆ ಆತಂಕ ತರಿಸಿದೆ.

ಹೌದು, ಈ ಸಂಬಂಧ ಚಾಮರಾಜನಗರ ಕಾರಾಗೃಹ ಅಧೀಕ್ಷಕ ವಿಜಯ್ ರೋಡ್ಕರ್. ರ‍್ಯಾಂಡಮ್ ಟೆಸ್ಟ್ ನಡೆಸಿದ ವೇಳೆ 16 ಮಂದಿ ವಿಚಾರಣಾಧೀನ ಕೈದಿಗಳಿಗೆ ಸೋಂಕಿರುವುದು ದೃಢವಾಗಿದೆ. ಆದ್ದರಿಂದ, ಎಲ್ಲಾ ಕೈದಿಗಳನ್ನು ಪರೀಕ್ಷೆಗೆ ಒಳಪಡಿಸಲು ಚಿಂತಿಸಲಾಗುತ್ತಿದ್ದು ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರಾಗೃಹದ ಗರಿಷ್ಠ ಸಾಮರ್ಥ್ಯ 105 ಮಂದಿಯದ್ದು ಆದರೆ ಈಗ 120 ಮಂದಿ ಇದ್ದಾರೆ. ಹೊಸದಾಗಿ ಬಂದ ಕೈದಿಗಳು ವೈರಸ್ ತಂದಿದ್ದಾರೆ. ಆ್ಯಂಟಿಜೆನ್ ಟೆಸ್ಟ್ ಅಷ್ಟೇ ಅವರಿಗೆ ಮಾಡಲಾಗಿದೆ. ಈಗಾಗಲೇ ಜೈಲೊಳಗೆ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು ಅದನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲಾಗುವುದು.

ಜೈಲಿನ ಸಿಬ್ಬಂದಿಗೆ ನಡೆದ ಕೋವಿಡ್ ಟೆಸ್ಟ್ ನಲ್ಲಿ ಎಲ್ಲರಿಗೂ ನೆಗೆಟಿವ್ ಬಂದಿದೆ ಎಂದು ಅವರು ಮಾಹಿತಿ ನೀಡಿದರು.ಒಟ್ಟಿನಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಸಂಬಂಧಿಕರ ಭೇಟಿಗೆ ನಿರ್ಬಂಧ, ಮಾಸ್ಕ್ ಕಡ್ಡಾಯ, ಸ್ಯಾನೀಟೇಶನ್ ನಂತಹ ಕ್ರಮ ಕೈಗೊಂಡಿದ್ದರೂ ಕೊರೊನಾ ದಾಂಗುಡಿ ಇಟ್ಟಿರುವುದು ಕಳವಳಕಾರಿಯಾಗಿದೆ.

ವರದಿ: ಗುಳಿಪುರ ಎಂ. ನಂದೀಶ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com