ಆರ್ಥಿಕ ಸಂಕಷ್ಟ: ಬಾಗಿಲು ಮುಚ್ಚಲಿವೆ ರಾಜ್ಯದ 187 ಮಹಿಳಾ ಸಾಂತ್ವನ ಕೇಂದ್ರಗಳು!

ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಡಿ ಬರುವ ಸುಮಾರು 187 ಸಾಂತ್ವನ ಕೇಂದ್ರಗಳ ಬಾಗಿಲು ಬಂದ್ ಆಗಲಿದೆ.
ಬಸವನಗುಡಿ ಮಹಿಳಾ ಠಾಣೆ
ಬಸವನಗುಡಿ ಮಹಿಳಾ ಠಾಣೆ

ಬೆಂಗಳೂರು: ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಡಿ ಬರುವ ಸುಮಾರು 187 ಸಾಂತ್ವನ ಕೇಂದ್ರಗಳ ಬಾಗಿಲು ಬಂದ್ ಆಗಲಿದೆ.

ಕೌಟುಂಬಿಕ ಕಲಹ, ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಪ್ರಕರಣಗಳ ಸಂತ್ರಸ್ತರಿಗೆ ತಾತ್ಕಾಲಿಕ ರಕ್ಷಣೆ ಒದಗಿಸಲು  2001 ರಲ್ಲಿ ಈ ಸಾಂತ್ವನ ಕೇಂದ್ರಗಳನ್ನು ತೆರೆಯಲಾಯಿತು.

ಈ ಕೇಂದ್ರಗಳಲ್ಲಿ ಒಬ್ಬ ಕೌನ್ಸೆಲರ್ ಮತ್ತು ಮೂವರು ಸಾಮಾಜಿಕ ಕಾರ್ಯಕರ್ತೆಯರಿದ್ದು, ನೊಂದ ಮಹಿಳೆಯರಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದರು.

ಆದರೆ ಇಲಾಖೆಯ ಹಣಕಾಸು ಕೊರತೆಯಿಂದಾಗಿ ಈ ಕೇಂದ್ರಗಳು ಅಸ್ಥಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಬಜೆಟ್ ನಲ್ಲಿ ಈ ಕೇಂದ್ರಗಳಿಗೆ ಹಣದ ಅನುದಾನ ಇರಲಿಲ್ಲ, ಹೆಣ್ಣು ಮಕ್ಕಳ ಜನನಕ್ಕಾಗಿ ಸರ್ಕಾರ ರೂಪಿಸಿರುವ ಭಾಗ್ಯಲಕ್ಷ್ಮಿ ಯೋಜನೆ ಹಣದ ಅನುದಾನದಿಂದ ಈ ಕೇಂದ್ರಗಳು  ನಡೆಯುತ್ತಿವೆ ಎಂದು ಮಹಿಳಾ ಮತ್ತು ಇಲಾಖೆ ನಿರ್ದೇಶಕ ಆರ್ ಎಸ್ ಪೆದ್ದಪ್ಪಯ್ಯ ತಿಳಿಸಿದ್ದಾರೆ.

ಈ ಕೇಂದ್ರಗಳಲ್ಲಿ ಕೆಲಸ ಮಾಡುವ ಕೌನ್ಸೆಲರ್ ಗಳಿಗೆ ತಿಂಗಳಿಗೆ 13 ಸಾವಿರ ರು ವೇತನ ನೀಡಲಾಗುತ್ತದೆ, ಈ ಕೌನ್ಸೆಲರ್ ಗಳಿಗೆ ಮುಂದಿನ ತಿಂಗಳ ಅಂತ್ಯದ ವೇಳೆಗೆ ಕೆಲಸ ಬಿಡಲು ಸೂಚಿಸಲಾಗಿದೆ. ಈ ಕೇಂದ್ರಗಳಲ್ಲಿ ಕೆಲಸ ಮಾಡುವ ಕೌನ್ಸೆಲರ್ ಗಳಿಗೆ ಕಳೆದ ಐದು ತಿಂಗಳಿಂದ ವೇತನ ಪಾವತಿಸಿಲ್ಲ.

ಕೇಂದ್ರ ಸರ್ಕಾರದ ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆ ಲೈಂಗಿಕ ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಸಲಹೆ ನೀಡುವ ಉದ್ದೇಶವನ್ನು ಹೊಂದಿದ್ದರೂ ಕರ್ನಾಟಕದಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯ ಮಾಡುತ್ತಿಲ್ಲ, ಜಿಲ್ಲೆಗೆ ಕೇವಲ ಒಂದೇ ಒಂದು ಕೇಂದ್ರ ಇರುವ ಕಾರಣ ಎಲ್ಲರಿಗೂ ಸುಲಭವಾಗಿ ನೆರವು ಸಿಗಲು ಸಾಧ್ಯವಾಗುತ್ತಿಲ್ಲ.

ಬೆಂಗಳೂರಿನ ವಿಕಾಸ ಸೌಧದಲ್ಲಿ  ಸಖಿ ಕೇಂದ್ರವಿದ್ದು, ಇಲ್ಲಿರುವ ಒಬ್ಬ ಕೌನ್ಸೆಲರ್ ನಾಲ್ಕು ಮಿಲಿಯನ್ ಮಹಿಳೆಯರಿಗೆ ಸಹಾಯ ಮಾಡಬೇಕಾಗಿದೆ, ಕಿರುಕುಳ ಅಥವಾ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಮಹಿಳೆ ಕೌನ್ಸೆಲಿಂಗ್ ಗಾಗಿ ವಿಕಾಸ ಸೌಧಕ್ಕೆ ಬರಲು ಸಾಧ್ಯವೇ ಎಂದು ಹೆಸರು ಪ್ರಕಟಿಸಲು ಒಪ್ಪದ ಮಹಿಳಾ ಸಾಂತ್ವನ ಕೇಂದ್ರದ ಕೌನ್ಸೆಲರ್ ಒಬ್ಬರು ಪ್ರಶ್ನಿಸಿದ್ದಾರೆ.

15 ಸಾಂತ್ವನ ಕೇಂದ್ರಗಳ ಜೊತೆಗೆ ಬೆಂಗಳೂರಿನಲ್ಲಿ ವನಿತಾ ಸಹಾಯವಾಣಿಯನ್ನು ಪರಿಹಾರ್ ಎಂಬ ಎನ್ ಜಿ ನಡೆಸುತ್ತಿದೆ, ಆದರೆ ನೊಂದವರಿಗೆ ಇದು ಸುಲಭದಲ್ಲಿ ಸಿಗುತ್ತಿಲ್ಲ. 

ಅಕ್ಟೋಬರ್ 9 ರವರೆಗೆ ಇನ್ ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಪ್ರಧಾನ ಕಚೇರಿಯ ಆವರಣದಲ್ಲಿ ಅದು ತನ್ನದೇ ಆದ ಜಾಗವನ್ನು ಹೊಂದಿದ್ದರೂ, ಇದು ಈಗ ಬೆಂಗಳೂರಿನ ಶಿವಾಜಿನಗರ ಮತ್ತು ಬಸವಂಗುಡಿಯಲ್ಲಿರುವ ಎರಡು ಮಹಿಳಾ ಪೊಲೀಸ್ ಠಾಣೆಗಳ ಒಳಗೆ ಕಾರ್ಯನಿರ್ವಹಿಸುತ್ತಿದೆ.

ಸಮಾಲೋಚನೆಯ ನೀತಿ ಗೌಪ್ಯತೆ ಕಾಪಾಡುವುದಾಗಿದೆ, ಹೆಲ್ಪ್‌ಲೈನ್ ಪೊಲೀಸ್ ಠಾಣೆಯೊಳಗೆ ಇದ್ದರೆ, ಒಬ್ಬ ಮಹಿಳೆ ಬಂದು ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಕಷ್ಟ ಮಹಿಳೆಯರು ಮತ್ತು ಮಕ್ಕಳು ಆರಾಮವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪ್ರತ್ಯೇಕ ಸ್ಥಳವು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com